ಮಾಜಿ ಸಚಿವರ ಮಾತಿನ ಸಮರ
ನರಗುಂದ: ಪಟ್ಟಣದ ಪುರಸಭೆ ಚುನಾವಣೆ ಮತದಾನದ ನಿಮಿತ್ತ ಗುರುವಾರ ಮಾಜಿ ಸಚಿವ ಬಿ.ಆರ್. ಯಾವಗಲ್ 23ನೇ ವಾರ್ಡಿನಲ್ಲಿ ಮತದಾನ ಮಾಡಲು ಹೋದಾಗ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಸಿ. ಪಾಟೀಲ ಮತ್ತು ಮಾಜಿ ಸಚಿವ ಬಿ.ಆರ್. ಯಾವಗಲ್ರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮಾಜಿ ಸಚಿವ ಬಿ.ಆರ್. ಯಾವಗಲ್ ಅವರು ಮತಚಲಾಯಿಸಿದ ನಂತರ ಮತಗಟ್ಟೆಯಲ್ಲಿಯೇ ನಿಂತಿರುವುದನ್ನು ಕಂಡ ಶಾಸಕ ಸಿ.ಸಿ. ಪಾಟೀಲ ಹೊರಹೋಗುವಂತೆ ಯಾವಗಲ್ರನ್ನು ಆಗ್ರಹಿಸಿದರು. ಇದರಿಂದ ಕುಪಿತಗೊಂಡ ಯಾವಗಲ್ ಅದನ್ನು ಕೇಳಲು ನೀನ್ಯಾರು? ಅಧಿಕಾರಿಗಳು ಹೇಳಲಿ ನಾನು ಹೋಗುವೆ ಎಂದು ಹೇಳಿದರು. ನಂತರ ಇವರಿಬ್ಬರ ನಡುವೆ ಅಸಭ್ಯವಾದ ಮಾತಿನ ವಾಗ್ವಾದ ಜರುಗಿತು.
ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಆರ್. ಯಾವಗಲ್, ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿ ಎಲ್ಲರಿಗೂ ಮತದಾನ ಮಾಡುವ ಹಕ್ಕಿದೆ. ಅದರಂತೆಯೇ ತಾವು 23ನೇ ವಾರ್ಡ್ನಲ್ಲಿ ಕುಟುಂಬ ಸಮೇತ ಮತ ಚಲಾಯಿಸಲು ಬಂದಾಗ ಶಾಸಕ ಸಿ.ಸಿ. ಪಾಟೀಲ ಆಗಮಿಸಿ ನೀವೊಬ್ಬ ಮಾಜಿ ಸಚಿವರಾಗಿ ನಿಮ್ಮ ಮತ ಹಾಕಿ ಹೋಗುವುದನ್ನು ಬಿಟ್ಟು 23ನೇ ವಾರ್ಡಿನ ಚುನಾವಣಾ ಕೇಂದ್ರದಲ್ಲಿ ನಿಂತು ಮತದಾರರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಅಸಭ್ಯವಾಗಿ ಮಾತನಾಡಿದ್ದಾರೆ. ಮೇಲಾಗಿ ಅವರು ಈ ಮತದಾನ ಕೇಂದ್ರಕ್ಕೆ ಆಗಮಿಸಿದ್ದೂ ಕಾನೂನು ಬಾಹಿರ. ಓರ್ವ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದು ನಾಚಿಕೆಗೇಡು ಎಂದರು. ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಯಾವಗಲ್ಲರಿಗೆ ನಾನು ಅಸಭ್ಯವಾಗಿ ಮಾತನಾಡಿಲ್ಲ. ಮತದಾನ ಮಾಡಿದ ಬಳಿಕ ನೀವು ಏಕೆ ಹೋಗಿಲ್ಲವೆಂದು ಕೇಳಿದ್ದೇನೆ. ಯಾವಗಲ್ ಹಾಗೂ ಕುಟುಂಬದವರು ಮತದಾರರನ್ನು ಸೆಳೆಯಲು ಚುನಾವಣೆ ಕೇಂದ್ರದಲ್ಲಿ ಪ್ರಯತ್ನಿಸುತ್ತಿದ್ದರು. ಹಾಗಾಗಿ ನಾನು ಪ್ರಶ್ನಿಸಿದ್ದೇನೆ. ನಾನು ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದರು. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪುರಸಭೆ ಅಧಿಕಾರಿ ಚುಕ್ಕಾಣಿ ಹಿಡಿಯಲು ಮಾಜಿ ಸಚಿವರಿಬ್ಬರೂ ಭಾರಿ ಪೈಪೋಟಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

