ಗದಗ

ಕಲಿಸಿದ ಗುರು, ಶಾಲೆ ಮರೆಯಬೇಡಿ: ಪಾಟೀಲ್

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 10
ವಿದ್ಯಾರ್ಥಿಗಳಾದವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಕಲಿಸಿದ ಗುರುವನ್ನು ಹಾಗೂ ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪಪೂ ಮಹಾವಿದ್ಯಾಲಯದ ಉಪನ್ಯಾಸಕ ಆರ್.ಎಸ್. ಪಾಟೀಲ ಹೇಳಿದರು.
ಈಚೆಗೆ ಅವರು ತಾಲೂಕಿನ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಶಿಸ್ತು, ಸಮಯಪಾಲನೆ, ಸ್ಷಷ್ಟ ಗುರಿಯನ್ನು ಸಾಧಿಸುವ ಛಲವನ್ನು ಬೋಧನೆಯ ಮುಖಾಂತರ ಕಲಿಸಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹಾತಲಗೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೊಟ್ರೇಶ ವಿಭೂತಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಶಿಕ್ಷಕ ಎಸ್.ಕೆ. ಹವಾಲ್ದಾರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿಕೆಗೆ ಬೇಕಾದ ಎಲ್ಲಾ ಸೌಕರ್ಯಗಳು ಹಾಗೂ ಉತ್ತಮ ಸಿಬ್ಬಂದಿ ವರ್ಗವಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಸೂಚಿಸಿದರು. ಅಕ್ಷತಾ ಶಿರಹಟ್ಟಿಮಠ, ಮಲ್ಲಪ್ಪ ಮುಳಗುಂದ, ರಮೇಶ ಕೆಂಚಣ್ಣವರ, ಯಮನೂರಸಾಬ ದುಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸೌಮ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಕೆ.ಎಚ್. ಶೆಟ್ಟರ ಸ್ವಾಗತಿಸಿದರು. ಶಿಕ್ಷಕ ಶಾಂತಗೌಡ ಮರಿಗೌಡರ ನಿರೂಪಿಸಿದರು. ಸುನಿತಾ ಜಟ್ಟೆಣ್ಣವರ ವಂದಿಸಿದರು.

ಅತಿ ಆಸೆ ಭ್ರಷ್ಟಾಚಾರಕ್ಕೆ ಮೂಲ: ರಾಮಣ್ಣ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 10
ಅತಿಯಾದ ಆಸೆ ನಮ್ಮನ್ನು ಭ್ರಷ್ಟಾಚಾರಿಯನ್ನಾಗಲು ಪ್ರೆರೇಪಿಸುತ್ತವೆ. ದಾರಿ ತಪ್ಪಿ ನಡೆಯುವುದು ಭ್ರಷ್ಟಾಚಾರದ ಮೊದಲ ಹಂತವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ರಾಮಣ್ಣ ಭಜಂತ್ರಿ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಸಮೀಪದ ಶಿಗ್ಲಿ ಗ್ರಾಮದ ಎಸ್‌ಎಸ್‌ಕೆ ಕೂಡ್ಲಮಠ ಪ್ರೌಢಶಾಲೆಯಲ್ಲಿ ಶಿರಹಟ್ಟಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡ ವಿ.ಪಿ. ಬಳಿಗಾರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಭ್ರಷ್ಟಾಚಾರವು ಇಂದು ಎಲ್ಲ ರಂಗಗಳಲ್ಲಿ ವ್ಯಾಪಿಸಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ. ನಮ್ಮ ಆಚಾರ ವಿಚಾರಗಳು, ನಡವಳಿಕೆಗಳು ಉತ್ತಮವಾಗಿದ್ದಲ್ಲಿ ಭ್ರಷ್ಟಾಚಾರವನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಬಹುದಾಗಿದೆ.
ಇದಕ್ಕಿಂತ ಮೊದಲು ನಾವು ನಮ್ಮಲ್ಲಿ ಮನುಷ್ಯತ್ವ, ಮಾನವೀಯತೆ, ಅನುಕಂಪಗಳನ್ನು ಬೆಳೆಸಿಕೊಂಡಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಬಹುದಾಗಿದೆ. ಭಾರತದಲ್ಲಿ ಸಾಕಷ್ಟು ಜನ ಹಸಿವೆಯಿಂದ ತೊಂದರೆಗೆ ಒಳಗಾಗಿರುವುದನ್ನು ನೋಡುತ್ತೇವೆ. ನಾವು ನಮಗಿಂತ ಕಡಿಮೆ ಅಂತಸ್ತಿನ ಜನರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ನಮ್ಮಲ್ಲಿನ ಅತಿಯಾದ ಆಸೆ ನಮ್ಮನ್ನು ಭ್ರಷ್ಟಾಚಾರಿಗಳನ್ನಾಗಿ ಮಾಡುತ್ತದೆ ಎಂದರು.
ಉದ್ಘಾಟನೆ ನೆರವೇರಿಸಿದ ವಿ.ಸಿ. ಹತ್ತಿಕಾಳ ಭ್ರಷ್ಟಾಚಾರ ಕುರಿತು ಮಾತನಾಡಿದರು. ಎಸ್.ಪಿ. ಬಳಿಗಾರ, ಮುಖ್ಯೋಪಾಧ್ಯಾಯ ಎನ್.ಎನ್. ನೆಗಳೂರ ಹಾಗೂ ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿದರು. ಅಶೋಕ ಸೊರಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್.ಎಫ್. ತಳವಾರ, ಫಕ್ಕಿರಪ್ಪ ತೋಟದ, ಪ್ರಮೀಳಾ ಸಾಂಗ್ಲೀಕರ್, ಅಮರಪ್ಪ ಕೊಕ್ಕರಗುಂದಿ, ಸಾಹಿತಿ ನಾಗರಾಜ ಹಣಗಿ ಹಾಗೂ ಶಾಲೆಯ ಸಿಬ್ಬಂದಿ ಹಾಜರಿದ್ದರು.
ನಿವೃತ್ತ ಶಿಕ್ಷಕ ಆರ್.ಎಂ. ಹೊನಕೇರಿ ಸ್ವಾಗತಿಸಿದರು. ಬಿ.ಬಿ. ಬಳಿಗಾರ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಎನ್.ವೈ. ಕುರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.