ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 19
ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 16ನೇ ವಾರ್ಡಿನ ಜನರು ಸೋಮವಾರ ಖಾಲಿ ಕೊಡಗಳನ್ನು ಕೈಯಲ್ಲಿ ಹಿಡಿದು ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿ, ನೀರು ಪೂರೈಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಡಿಎಸ್ ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷ ಅಕ್ಬರಸಾಬ ಯಾದಗಿರಿ ಮಾತನಾಡಿ, ವಾರ್ಡಿನ ಅಕ್ಕಪಕ್ಕದಲ್ಲಿ ಎಲ್ಲಿಯೂ ಬಾವಿ ಇರದ ಕಾರಣ ನಲ್ಲಿ ನೀರೆ ಗತಿಯಾಗಿದ್ದು, ಪಟ್ಟಣ ಪಂಚಾಯತಿ ತುರ್ತಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ತೀವ್ರ ತೊಂದರೆ ಇರುವ ಕುರಿತು ನಾಲ್ಕು ತಿಂಗಳ ಮೊದಲೇ ಮುಖ್ಯಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಿದರು.
ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನತೆ ನೀರಿಗಾಗಿ ಪರದಾಡುವಂತಾಗಿದೆ. ಪಟ್ಟಣ ಪಂಚಾಯತಿಗೆ ಸಮರ್ಪಕ ನೀರು ಪೂರೈಕೆಗಾಗಿಯೇ ಸರ್ಕಾರ ಸಾಕಷ್ಟು ಹಣ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಇದೇ ಬಡಾವಣೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನತೆ ಕತ್ತಲಲ್ಲಿಯೇ ನಿತ್ಯ ಕಾಲ ಕಳೆಯುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಕೂಡಲೇ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಶಿವು ಲಮಾಣಿ, ಎಸ್.ಎಫ್. ಹಾವೇರಿಮಠ, ಸುರೇಶಗೌಡ್ರ ಮರಿಗೌಡ್ರ, ಲಲಿತಾ ಬಕ್ಕಸದ, ವಿಜಯಲಕ್ಷ್ಮೀ ಬಕ್ಕಸದ, ರೇಣುಕಾ ಡೊಂಕಬಳ್ಳಿ, ಸಾವಿತ್ರಿ ಕಲ್ಲೂರ, ಹನಮವ್ವ ಬಸಾಪುರ, ದೇವಪ್ಪ ಕುಳಗೇರಿ, ಫಕೀರೇಶ ಸುಣಗಾರ, ಕಾರ್ತಿಕ ದಿವಟರ, ಬಸಪ್ಪ ಕನ್ಯಾಳ, ಮಾಬೂಬಿ ಬನ್ನಿಕೊಪ್ಪ, ಬರಮವ್ವ ಮ್ಯಾಗೇರಿ ಮನವಿ ನೀಡುವಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

