ನಕಲಿ ಹಕ್ಕುಪತ್ರ: ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ನಗರದ ವಸಂತಸಿಂಗ್ ಜಮಾದಾರ ನಗರ ಹಾಗೂ ಮಂಜುನಾಥ ನಗರದಲ್ಲಿ ಗದಗ-ಬೆಟಗೇರಿ ನಗರಸಭೆ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ವಿತರಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಗುರುವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ ಮಾತನಾಡಿ, ನಗರಸಭೆ ವ್ಯಾಪ್ತಿಯ ವಸಂತಸಿಂಗ್ ಜಮಾದಾರ ಹಾಗೂ ಮಂಜುನಾಥ ನಗರದಲ್ಲಿ ಬಡ ವರ್ಗದ ಜನರಿಗೆ ಇಂದಿರಾ ಆವಾಸ್ ಯೋಜನೆಯಡಿ ನಿವೇಶನ ವಿತರಿಸಲಾಗಿದೆ. ಈ ಭಾಗದಲ್ಲಿ ಬಹುತೇಕ ಜನರು ಕಡು ಬಡವರಾಗಿದ್ದು, ದಿನನಿತ್ಯ ದುಡಿದೇ ಜೀವನ ಸಾಗಿಸಬೇಕಾಗಿದೆ. ಈ ಭಾಗದ ಜನ ಕೆಲಸ ಅರಸಿ ಹೋದ ಸಂದರ್ಭದಲ್ಲಿ ಇಲ್ಲಿಯೇ ವಾಸಿಸುತ್ತಿರುವ ಇಸ್ಮಾಯಿಲಸಾಬ ಡಂಬಳ ಹಾಗೂ ಮಂಜುನಾಥ ನಗರದ ಸಿದ್ದಣ್ಣ ಮೇಳನರ ಎನ್ನುವವರು ಇಲ್ಲಿನ ನಿವೇಶನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿದ್ದಾರೆ. ಅಲ್ಲದೆ, ಲಕ್ಷಾಂತರ ರುಪಾಯಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಇಲ್ಲಿ ಆಶ್ರಯ ಪಡೆದಿರುವ ಅನೇಕ ವಾರಸುದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ನಿವೇಶನ ಪಡೆದವರು 10 ವರ್ಷಗಳ ವರೆಗೆ ಮಾರಾಟ ಮಾಡಲು ಬರುವುದಿಲ್ಲ. ಅಲ್ಲದೆ, ಬಾಡಿಗೆ ನೀಡುವ ಅಧಿಕಾರವಿರುವುದಿಲ್ಲ. ಆದರೆ, ಇಲ್ಲಿನ ಕೆಲವರು ನಿವೇಶನಗಳನ್ನು ಲಕ್ಷಾಂತರ ರುಪಾಯಿಗೆ ಮಾರಾಟ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಹಲವು ಜನರ ಕೈವಾಡವಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುಮಾರು ಅರ್ಧ ಗಂಟೆ ನಗರಸಭೆಯ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ನಗರಸಭೆ ಅಭಿಯಂತರ ದೊಡ್ಡಮನಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ ಕರಿ, ಮಂಜುನಾಥ ದೊಡ್ಡಮನಿ, ರಮೇಶ ಗೌಡರ, ಬಸವರಾಜ ಮುಳಗುಂದ, ಸರ್ಜಿತಸಿಂಗ್ ಗೋಡೆ, ಇಮ್ತಿಯಾಜ ಮಾನ್ವಿ, ಶರೀಫ ಬಿಳೆಯಲಿ, ಪರಶುರಾಮ ಚಲವಾದಿ, ಮೋಹನಸಿಂಗ್ ಗೋಡೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

