ಹೆಣ್ಣು ಮಗುವಿನ ಸಂರಕ್ಷಣೆ ಅತ್ಯವಶ್ಯ: ನಾಯಕ
ಕನ್ನಡಪ್ರಭ ವಾರ್ತೆ, ಗದಗ, ಮಾ. 25
ಇಂದಿನ ಆಧುನಿಕ ಸಮಾಜದಲ್ಲಿಯೂ ಮಹಿಳೆ ಹಲವು ರೀತಿಯ ಶೋಷಣೆಗೊಳಗಾಗುತ್ತಿದ್ದು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು ಹಾಗೂ ಮಹಿಳೆ ಮತ್ತು ಪುರುಷರ ಅನುಪಾತದಲ್ಲಿ ಸಮಾನತೆ ಕಾಣುವ ಮೂಲಕ ಹೆಣ್ಣು ಮಗುವಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.
ಅವರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ ಇವುಗಳ ಆಶ್ರಯದಲ್ಲಿ ಎನ್.ಜಿಓ ಸದಸ್ಯರು, ಸ್ಥಳೀಯ ಪತ್ರಿಕಾ ಪ್ರತಿನಿಧಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ವಕೀಲರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ತಡೆ-1994ರ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳು ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಭ್ರೂಣಲಿಂಗ ಪತ್ತೆಯು ಕಾನೂನು ಬಾಹೀರವಾಗಿದ್ದರೂ ಹಲವು ಕಡೆಗಳಲ್ಲಿ ಈ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ಹಲವು ರೀತಿಯ ಕಾನೂನುಗಳನ್ನು ರೂಪಿಸಿದೆ. ಕೆಲವರು ಕಾನೂನಿನ ಅರಿವಿಲ್ಲದೇ ಇರುವವರು ಈ ಭ್ರೂಣಲಿಂಗ ಪತ್ತೆಗೆ ಮುಂದಾಗುತ್ತಿದ್ದು, ಕಾರಣ ಪ್ರಜ್ಞಾವಂತ ನಾಗರಿಕರು ಈ ಕುರಿತು ಮಾಹಿತಿ ತಿಳಿದುಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಇಂದು ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದರಿಂದ ಮಹಿಳೆಯರ ಸಂಖ್ಯೆಯು ಕ್ಷೀಣಿಸುತ್ತಿದೆ. 1000 ಪುರುಷರಿಗೆ 968 ಮಹಿಳೆಯರಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಗೆ ಶ್ರಮಿಸುವಂತೆ ಕೋರಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ಕೆ.ಎಚ್. ಬೇಲೂರ ಮಾತನಾಡಿ, ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಶಾಸನ-1994ರ ಕಾಯ್ದೆಯನ್ನು 1996ರ ಜನವರಿ 1 ರಂದು ಜಾರಿಗೆ ತರಲಾಗಿದ್ದು, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು, ಮಹಿಳೆ ಮತ್ತು ಪುರುಷರ ಅನುಪಾತದಲ್ಲಿ ಸಮಾನತೆ ಕಾಪಾಡುವುದು ಹಾಗೂ ಭವಿಷ್ಯದಲ್ಲಿ ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಪುರುಷರ ಮತ್ತು ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿರುತ್ತದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಗಂಡು ಹೆಣ್ಣಿನ ಅನುಪಾತದಲ್ಲಿ ಹೆಚ್ಚಿನ ಅಂತರ ಉಂಟಾದರೆ ಅದು ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ. ಗಂಡು ಹೆಣ್ಣಿನ ಅನುಪಾತದಲ್ಲಿನ ಈ ವ್ಯತ್ಯಾಸಕ್ಕೆ ಪ್ರಮುಖ ಕಾರಣ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಲಿಂಗದ ಹತ್ಯೆ, ಗಂಡು ಮಕ್ಕಳ ಮೇಲಿನ ಅನಗತ್ಯ ವ್ಯಾಮೋಹ, ಮಕ್ಕಳ ಬಗೆಗಿನ ತಾತ್ಸಾರದಿಂದಾಗಿ ಹೆಣ್ಣು ಭ್ರೂಣಹತ್ಯೆಯಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಅಮಾನುಷವಾದ ಈ ಕೃತ್ಯವನ್ನು ತಡೆಗಟ್ಟಲು ಸರ್ಕಾರವು ಹಲವು ಕಾನೂನುಗಳನ್ನು ರೂಪಿಸಿದೆ. ಸಾರ್ವಜನಿಕರು ಈ ಕುರಿತು ಜಾಗೃತಿ ಹೊಂದುವ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಿ.ಬಿ. ಚನ್ನಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸಿಇಓ ವೀರಣ್ಣ ತುರಮರಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಆರ್.ಎನ್.ಪಾಟೀಲ, ಡಾ. ವಾಣಿ ಶಿವಪುರ, ವೈ.ಕೆ. ಭಜಂತ್ರಿ ಮುಂತಾದವರು ಆಗಮಿಸಿದ್ದರು. ಬಿ.ಎನ್. ಮಸರಕಲ್ಲ ಸ್ವಾಗತಿಸಿ, ನಿರೂಪಿಸಿದರು. ಆರ್.ವಿ. ಕುಪ್ಪಸ್ತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

