ಗದಗ

ಮತ್ತೆ ಹಳೆ ಹುಲಿಗಳೇ ಚುನಾವಣಾ ಅಖಾಡಕ್ಕೆ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 25
ಪ್ರಸಕ್ತ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿದ್ದು, ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗುವಂತಹ ವಾತಾವರಣ ಕಂಡು ಬರುತ್ತಿದೆ.
ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು 2008ರ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ನೀಡಲಿದ್ದು, ಪ್ರಾದೇಶಿಕ ಪಕ್ಷಗಳು ಹೊಸಬರಿಗೆ (ಯುವಕರಿಗೆ) ಅವಕಾಶ ನೀಡುವತ್ತ ಗಮನ ಹರಿಸಿರುವುದರಿಂದ ಈ ಬಾರಿಯ ಚುನಾವಣೆ ಹಳಬರ ಮತ್ತು ಹೊಸಬರ ಸಮ್ಮಿನಲದಿಂದ ಕೂಡಿದೆ.
ಕಳೆದ ಬಾರಿ ಕಾಂಗ್ರೆಸ್.ಗೆ ಸೋಲು: ಗದಗ ಜಿಲ್ಲೆ 2008ರ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ತವರು ಮನೆ ಎಂದು ಬಿಂಬಿತವಾಗಿತ್ತು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಿದ ಕಾಂಗ್ರೆಸ್ 4 ವಿಧಾನಸಭಾ ಸ್ಥಾನಗಳನ್ನು ಕಳೆದುಕೊಂಡಿತು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲನುಭವಿಸಿದ ಎಚ್.ಕೆ. ಪಾಟೀಲ, ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ ಹಾಗೂ ಎಚ್.ಆರ್. ನಾಯಕ ಅವರಿಗೆ ಮರಳಿ ಟಿಕೆಟ್ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಮತ್ತೊಮ್ಮೆ ಕಾಂಗ್ರೆಸ್ ಹಳಬರನ್ನೇ ನೆಚ್ಚಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಆಡಳಿತಾರೂಢ ಬಿಜೆಪಿ ಕೂಡ ಈ ಹಿಂದೆ ಯಡಿಯೂರಪ್ಪನವರ ಕೆಜೆಪಿಯಲ್ಲಿ ಜಿಲ್ಲೆಯ 3 ಜನ ಶಾಸಕರು ಗುರುತಿಸಿಕೊಂಡ ವೇಳೆಯಲ್ಲಿ ಹೊಸ ಮುಖಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಕೊನೆ ಕ್ಷಣದಲ್ಲಿ 3 ಜನ ಬಿಜೆಪಿಯಲ್ಲಿಯೇ ಉಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬಿಜೆಪಿ ಕೂಡ ಹಾಲಿ 4 ಜನ ಶಾಸಕರಿಗೆ ಮರಳಿ ಟಿಕೆಟ್ ನೀಡಲಿದ್ದು, ಬಿಜೆಪಿ ಶಾಸಕರು ತಾವು ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸಿದ್ಧರಾಗಿದ್ದಾರೆ. ಗೆಲುವಿಗಾಗಿ ಹಳಬರ ಮಧ್ಯೆ ಮತ್ತೊಮ್ಮೆ ಹೋರಾಟ ನಡೆಯುವುದು ನಿಶ್ಚಿತವಾಗಿದೆ.
ಹೊಸ ಅಭ್ಯರ್ಥಿಗಳು: ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆಯಾದರೂ, ಈ ಎರಡೂ ರಾಷ್ಟ್ರೀಯ ಪಕ್ಷಗಳು ಹಳಬರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಕೆಜೆಪಿ ಹಾಗೂ ಬಿಎಸ್.ಆರ್ ಯುವಕರಿಗೆ ಮತ್ತು ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿವೆ. ರೋಣ ಕ್ಷೇತ್ರದಿಂದ ಜೆಡಿಎಸ್ ಯುವ ಮುಖಂಡ ಹೇಮಗಿರೀಶ ಹಾವಿನಾಳ ಅವರನ್ನು ಕಣಕ್ಕಿಳಿಸಿದೆ. ಬಿಎಸ್.ಆರ್ ಕಾಂಗ್ರೆಸ್ ಗದಗನಲ್ಲಿ ಅನಿಲ ಮೆಣಸಿನಕಾಯಿ ಹಾಗೂ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಜಯಶ್ರೀ ಹಳ್ಳೆಪ್ಪನವರಿಗೆ ಟಿಕೆಟ್ ನೀಡಿದೆ. ಕೆಜೆಪಿಯಿಂದ ಗದಗ ವಿಧಾನಸಭಾ ಕ್ಷೇತ್ರದಲ್ಲಿ ರಾಜು ಕುರುಡಗಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ರೋಣ ಕ್ಷೇತ್ರದಿಂದ ಶರಣಬಸವ ಮೆಣಸಿನಕಾಯಿ, ಅಶೋಕ ಬೇವಿನಕಟ್ಟಿ ಹಾಗೂ ಕುಮಾರ ಹಕಾರಿ ಅವರ ಹೆಸರುಗಳೂ ಕೇಳಿ ಬರುತ್ತಿದ್ದು, ಇವರೆಲ್ಲಾ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. 4 ಕ್ಷೇತ್ರಗಳು ಸೇರಿ 11 ಜನ ಪಕ್ಷೇತರರು ಕಣಕ್ಕಿಳಿಯುವ ಸಾಧ್ಯತೆ ಇದ್ದು, ಅವರೆಲ್ಲಾ ಯುವಕರು ಮತ್ತು ಹೊಸಬರಾಗಿರುವುದು ಈ ಚುನಾವಣೆಯ ವಿಶೇಷ.

ಹೊಸಬರಿಗೆ ಪೀಕಲಾಟ
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಹೊಸಬರಿಗೆ ಹೋಲಿಕೆ ಮಾಡಿದಲ್ಲಿ ಹಳೆಯ ಅಭ್ಯರ್ಥಿಗಳು ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾರೆ. ಮೇಲಾಗಿ ಅವರವರ ಪಕ್ಷಗಳ ಪಾರಂಪರಿಕ ಮತಗಳಿವೆ. ಜಾತಿಯ ಹಿನ್ನೆಲೆಯೂ ಇದೆ. ಹಲವು ಕಾರ್ಯಕರ್ತರನ್ನು ಹೊಂದಿದ್ದಾರೆ. ಅವರಿಗೆ ಚುನಾವಣೆ ಎದುರಿಸುವುದು ಸುಲಭವಾಗಬಹುದು. ಆದರೂ ಹೊಸಬರಲ್ಲಿ ಹೆಚ್ಚಿನ ಉತ್ಸಾಹವಿದೆ. ಅವರ ಪಕ್ಷಗಳು ಈಗಷ್ಟೇ ಸ್ಥಾಪನೆಯಾಗಿರುವುದರಿಂದ ಹೆಚ್ಚಿನ ಪ್ರಭಾವ ಹೊಂದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಭಾವ ಕಡಿಮೆ ಇದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚಿನ ಪ್ರಭಾವ ಹೊಂದಿವೆ. ಈಗಷ್ಟೇ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಯುವಕರಿಗೆ ಇದೆಲ್ಲಾ ಪೀಕಲಾಟವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.

- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.