ಆಧ್ಯಾತ್ಮದಿಂದ ಮಹಿಳಾ ದೌರ್ಜನ್ಯ ನಿವಾರಣೆ
ಗದಗ: ಆಧ್ಯಾತ್ಮಿಕ, ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಹೋಗುವುದರಿಂದ ಸರ್ವರ ಭವಿಷ್ಯ, ಸುಂದರ ಸುಭದ್ರವಾಗುತ್ತದೆ. ಆಧ್ಯಾತ್ಮಿಕ ಒಲವಿನಿಂದ ಮಹಿಳಾ ದೌರ್ಜನ್ಯ ನಿವಾರಣೆ ಸಾಧ್ಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ್ ಹೇಳಿದರು. ಈಚೆಗೆ ಅವರು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಧ್ಯಾತ್ಮಿಕ, ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಹೋಗುವುದರಿಂದ ಸರಳ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂಬುದು ಬ್ರಹ್ಮಕುಮಾರಿ ಅಕ್ಕನವರ ಬದುಕು ಇಡೀ ಜಗತ್ತಿಗೆ ಮಾದರಿಯಾಗಿದೆ. ಆಧ್ಯಾತ್ಮ ಒಲವು ಬೆಳೆಸುವ ಸದುದ್ದೇಶದಿಂದ ಪರಿಶ್ರಮಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯ ವಿವಿ ಶ್ರಮ ಶ್ಲಾಘನೀಯವಾಗಿದೆ ಎಂದರು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಮಾತನಾಡಿದರು. ಗದಗ ಈಶ್ವರೀ ವಿವಿಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ, ಅತಿಥಿಗಳಾಗಿ ಆಗಮಿಸಿದ್ದ ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ ಕೆ.ಎಚ್, ಗದಗ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ನಿರೂಪಿಸಿ, ವಂದಿಸಿದರು.
ಗುಡಿಸಲು ಮುಕ್ತ ಕ್ಷೇತ್ರ ನಿರ್ಮಾಣ
ಗಜೇಂದ್ರಗಡ: ಗುಡಿಸಲು ಮುಕ್ತ ಮತ ಕ್ಷೇತ್ರವನ್ನಾಗಿಸುವುದೇ ನನ್ನ ಮಹತ್ವಾಕಾಂಕ್ಷೆಯ ಕನಸಾಗಿದೆ. ಇದಕ್ಕೆ ಕಳೆದ 9 ವರ್ಷದಲ್ಲಾದ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಸ್ಥಳೀಯ ಕಟ್ಟಿ ಬಸವೇಶ್ವರ ರಂಗಮಂದಿರದಲ್ಲಿ ಈಚೆಗೆ ವಾಜಪೇಯಿ ವಸತಿ ಯೋಜನೆ ಅಡಿ 2012-13ನೇ ಸಾಲಿಗೆ ಮನೆ ನಿರ್ಮಿಸಿಕೊಳ್ಳಲು ಆಯ್ಕೆಯಾದ 1386 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಿ ಮಾತನಾಡಿದ ಅವರು, ವಸತಿ ಹೀನ ಬಡ ಕುಟುಂಬಗಳಿಗೆ ಗಜೇಂದ್ರಗಡ ಪಟ್ಟಣದಲ್ಲಿ 10 ಸಾವಿರ ಮನೆ ನಿರ್ಮಾಣದ ಗುರಿ ಹೊಂದಿದ್ದು, ಸ್ಥಳಾವಕಾಶದ ಅಡತಡೆಯಾಗಿದೆ ಎಂದರು. ಜನತೆ ಪ್ಲೋರೈಡ್ ಯುಕ್ತ ನೀರು ಸೇವನೆಯಿಂದ ಹಲವಾರು ರೋಗಕ್ಕೆ ಒಳಗಾಗುತ್ತಿರುವುದನ್ನು ಅರಿತು ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ತಾಲೂಕಿನ ಜಿಗಳೂರ ಸಮೀಪದಲ್ಲಿ ಅನುಷ್ಠಾನವಾಗುತ್ತಿದೆ ಎಂದು ತಮ್ಮ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಸಚಿವರು ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಪುರಸಭೆ ಆಡಳಿತಾಧಿಕಾರಿ ಐ.ಜಿ. ಗದ್ಯಾಳ, ಭಾಸ್ಕರ ರಾಯಬಾಗಿ, ಬಿ.ಎಂ. ಸಜ್ಜನ, ಪ್ರಭು ಚವಡಿ, ಬಾಳು ಗೌಡರ, ಎಚ್.ಎಸ್. ಸೋಂಪುರ, ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ, ಪುರಸಭೆಗೆ ಆಯ್ಕೆಯಾದ ನೂತನ ಸದಸ್ಯರು ಪಾಲ್ಗೊಂಡಿದ್ದರು. ಬಿ.ಎಸ್. ಬಸನಗೌಡರ ಸ್ವಾಗತಿಸಿ, ನಿರೂಪಿಸಿದರು. ಕೆ.ಓ. ಮುಲ್ಲಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

