ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಿ
ರೋಣ: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ವಿದ್ಯುತ್ ಬಿಲ್ ಕಡ್ಡಾಯವಾಗಿದ್ದು, ಗುಡಿಸಲುವಾಸಿಗಳು ವಿದ್ಯುತ್ ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ ಗುಡಿಸಲುವಾಸಿಗಳು ಪಡಿತರ ಚೀಟಿಯಿಂದ ವಂಚಿತರಾಗುವಂತಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ 10ಕ್ಕೂ ಹೆಚ್ಚು ಚನ್ನದಾಸರ ಕುಟುಂಬದವರು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಲೋಕಾಯುಕ್ತ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಗುಡಿಸಲುವಾಸಿಗಳು ಮನವಿ ಸಲ್ಲಿಸಿ, ನಾವು ಸುಮಾರು 20 ವರ್ಷಗಳಿಂದ ರೋಣ ಪಟ್ಟಣದಲ್ಲಿ ವಾಸವಾಗಿದ್ದೇವೆ. ಖಾಸಗಿ ವ್ಯಕ್ತಿಗಳು ಗುಡಿಸಲು ಹಾಕಿಕೊಂಡು ವಾಸಿಸಲು ಅನುಕೂಲ ಕಲ್ಪಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಗುಡಿಸಲುಗಳಿದ್ದು, ಅದರಲ್ಲಿ ಈಗಾಗಲೇ ಅನೇಕರು ಪಡಿತರ ಚೀಟಿಯನ್ನೂ ಹೊಂದಿದ್ದಾರೆ. ಹೊಸದಾಗಿ ಅರ್ಜಿ ಸಲ್ಲಿಸಲು ಈಗ ವಿದ್ಯುತ್ ಬಿಲ್ ಕಡ್ಡಾಯಗೊಳಿಸಿದ್ದರಿಂದ ನಮಗೆ ಬಿಲ್ನ ರಶೀದಿ ನೀಡಲು ಅಸಾಧ್ಯವಾಗಿದೆ. ಚಿಮಣಿ ಮತ್ತು ಕಂದೀಲು ಬೆಳಕಿನಲ್ಲಿ ರಾತ್ರಿ ಕಳೆಯುತ್ತೇವೆ. ನಾವು ಇಲ್ಲಿಯೇ ಶಾಶ್ವತವಾಗಿ ನೆಲೆಸಲು ಇಚ್ಛಿಸಿದ್ದೇವೆ. ಆದ್ದರಿಂದ ಸರ್ಕಾರದ ಸೌಲಭ್ಯ ನಮಗೂ ತಲುಪಬೇಕಾದಲ್ಲಿ ಪಡಿತರ ಚೀಟಿ ಪಡೆಯಲು ನಮಗೆ ವಿದ್ಯುತ್ ಬಿಲ್ ಬದಲಾಗಿ ಬೇರೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹನುಮವ್ವ ಚನ್ನದಾಸರ, ಯಂಕವ್ವ ಚನ್ನದಾಸರ, ಯಲ್ಲವ್ವ ಚನ್ನದಾಸರ, ದುರ್ಗವ್ವ ಚನ್ನದಾಸರ ಇತರರು ಇದ್ದರು. ಮನವಿ ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿ ಸಂಗನಗೌಡ್ರ ಮಾತನಾಡಿ, ಈ ಕುರಿತು ಕೂಡಲೇ ಜಿಲ್ಲಾ ನಾಗರಿಕ ಮತ್ತು ಆಹಾರ ಪೂರೈಕೆ ಇಲಾಖೆ ವಿಭಾಗದ ಅಧಿಕಾರಿಯನ್ನು ಸಂಪರ್ಕಸಿ, ವಿದ್ಯುತ್ ಸಂಪರ್ಕವಿಲ್ಲದೇ ಗುಡಿಸಲಿನಲ್ಲಿ ವಾಸಿಸುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ನನ್ನ ಹೆಸರಿನಲ್ಲಿದ್ದ ಆಸ್ತಿ (ಮನೆ)ಯನ್ನು ಬೇರೆಯವರ ಹೆಸರಿಗೆ ಹಕ್ಕು ಬಿಟ್ಟು ಕೊಟ್ಟ ರೀತಿಯಲ್ಲಿ ನಕಲಿ ದಾಖಲೆಗಳನ್ನು ತಾಲೂಕಿನ ಹಿರೇಹಾಳ ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳು ಸೃಷ್ಟಿಸಿದ್ದಾರೆ. ಇದರಿಂದ ನನಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡಿ. ಈ ಕುರಿತು ಗ್ರಾಪಂ ಮತ್ತು ತಾಪಂಗೆ ಅರ್ಜಿ ಸಲ್ಲಿಸಿದ್ದರೂ ವಿವರಣೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಹಿರೇಹಾಳ ಗ್ರಾಮದ ಮಾಜಿ ಸೈನಿಕ ಬಸಯ್ಯ ಪುರಾಣಿಕ ಲೋಕಾಯುಕ್ತರಲ್ಲಿ ಮನವಿ ಮಾಡಿದರು. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗಳಿಗೆ ಗಿಡದ ಟೊಂಗೆಗಳು ಅಡ್ಡಲಾಗಿ ಬಿದ್ದಿವೆ. ಅವುಗಳನ್ನು ತೆರವುಗೊಳಿಸಲು ಹೆಸ್ಕಾಂ ಕಾರ್ಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪಟ್ಟಣದ ಬಸವರಾಜ ನಾಯಕ ಮನವಿ ಸಲ್ಲಿಸಿದರು. ಒಟ್ಟು 3 ಅರ್ಜಿಗಳು ಬಂದಿದ್ದು, ಅವುಗಳ ಕುರಿತು ಲೋಕಾಯುಕ್ತ ಅಧಿಕಾರಿ ಸಂಗನಗೌಡ್ರ ಪರಿಶೀಲಿಸಿದರು. ಲೋಕಾಯುಕ್ತ ಸಿಬ್ಬಂದಿ ಮಹೇಶ ಅಯ್ಯನಗೌಡ್ರ, ನಾರಾಯಣ ತಾಯನ್ನವರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

