ಗದಗ

ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಕೊಡಿ

Published On :

ಗದಗ: ಅಂಗವಿಕಲರಿಗೆ ಅಪಹಾಸ್ಯ ಮಾಡುವ ಮನೋಭಾವ ದೂರಾಗಬೇಕು. ಅವರಿಗೆ ಅನುಕಂಪಕ್ಕಿಂತ ಅವಕಾಶ ನೀಡಿ ಅವರ ಕತೃತ್ವ ಶಕ್ತಿಯನ್ನು-ಆತ್ಮವಿಶ್ವಾಸವನ್ನು ಹೆಚ್ಚಿಸುವಂತಾಗಬೇಕೆಂದು ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಕರೆ ನೀಡಿದರು.
ಈಚೆಗೆ ಅವರು ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ನಿಡಗುಂದಿಯ ರೋಣ ತಾಲೂಕು ಗ್ರಾಮೀಣ ಅಂಗವಿಕಲರ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ 2013ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರ್ಕಾರದ ಸೌಲಭ್ಯಗಳು ಹೇರಳವಾಗಿದ್ದರೂ ಅಂಗವಿಕಲರಿಗೆ ಅವುಗಳ ಬಗ್ಗೆ ಹೆಚ್ಚಿನ ಅರಿವು-ಜಾಗೃತಿ ಇರುವುದಿಲ್ಲ. ಅಂತಹ ಮಾಹಿತಿ ಕೊರತೆ ನೀಗಿಸಲು ಶಿವಾನುಭವವನ್ನು ವೇದಿಕೆಯನ್ನಾಗಿಸುವ ಪ್ರಯತ್ನ ಇಲ್ಲಿ ನಡೆದಿದ್ದು ಶ್ಲಾಘನೀಯ ಕಾರ್ಯ. ಅಂಗವಿಕಲರ ಹಿತಾಭಿವೃದ್ಧಿಗಾಗಿ ಬೆಂಗಳೂರಿನ ವಿಂದ್ಯಾ ಪ್ರತಿಷ್ಠಾನ ಕಳಕಳಿಯ ಕೆಲಸ ಮಾಡಿದೆ. 400ಕ್ಕೂ ಹೆಚ್ಚು ವಿಕಲಾಂಗರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದು ಅಭಿನಂದನೀಯ ಕಾರ್ಯ ಎಂದರು.
ಶಿವಾನುಭವದಲ್ಲಿ ಅಂಗವಿಕಲರ ಸೇವಾ ರಂಗದ ಸಾಧನೆಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಬೆಂಗಳೂರಿನ ವಿಂದ್ಯಾ ಪ್ರತಿಷ್ಠಾನದ ಸಂಸ್ಥಾಪಕಿ ಪವಿತ್ರಾ ಗಿರಿ ದಂಪತಿ ಹಾಗೂ ಅಂಗವಿಕಲ ಸಾಧಕ ನಿಡಗುಂದಿಯ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಎಸ್.ಪಿ. ಅಣಗೌಡರ ಅವರನ್ನು ಶ್ರೀಗಳು ಸನ್ಮಾನಿಸಿದರು. ಎಸ್.ಪಿ. ಅಣಗೌಡರ ಹಾಗೂ ಗದಗ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಮಾತನಾಡಿದರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಕೆ.ಬಿ. ಧರಣಾ, ಅಶೋಕ ಗಿರಿ, ವಿರೂಪಾಕ್ಷಪ್ಪ ಬಳ್ಳಾರಿ, ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಅನ್ನಕ್ಕ ಬಡಿಗಣ್ಣವರ, ಖಜಾಂಚಿ ಸಿದ್ದಲಿಂಗಯ್ಯ ಹಿರೇಮಠ, ಸಹಕಾರ್ಯದರ್ಶಿ ವೀರೇಶ ಮುನವಳ್ಳಿ, ಶಿವಾನುಭವ ಸಮಿತಿ ಚೇರಮನ್ ತೋಂಟೇಶ ಕುರಡಗಿ ಇದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ಮಂಜುಳಾ ಹಾಸೀಲಕರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.