ಕಾಂಗ್ರೆಸ್ ಬೆಂಬಲಿಸಿ: ಜಯಮಾಲಾ
ಗಜೇಂದ್ರಗಡ: ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನತೆಯ ಹಿತ ಮರೆತು ಕೇವಲ ಸ್ವಾರ್ಥ ಸಾಧನೆಯಲ್ಲಿ ಕಾಲಹರಣ ಮಾಡಿದೆ. ಈ ಬಾರಿ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್ ಬೆಂಬಲಿಸಿ ಎಂದು ಹಿರಿಯ ಚಿತ್ರನಟಿ ಜಯಮಾಲಾ ಹೇಳಿದರು.
ಶುಕ್ರವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ ಮತಯಾಚಿಸಿ ಮಾತನಾಡಿದರು. ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಮೂಲಮಂತ್ರವೆಂದು ಅಧಿಕಾರ ಚುಕ್ಕಾಣಿ ಹಿಡಿದ ದಿನದಿಂದ ಅಧಿಕಾರದ ಕೊನೆಯ ವರೆಗೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಂತಹ ಜನ ವಿರೋಧಿ ಧೋರಣೆಯಲ್ಲೇ ಕಾಲ ಕಳೆದ ಬಿಜೆಪಿ ಜನರ ಮನಸ್ಸಿನಿಂದ ದೂರವಾಗಿದೆ ಎಂದು ಟೀಕಿಸಿದರು. ಮೇ 5ರಂದು ಮತದಾರರು ಕಾಂಗ್ರೆಸ್ಗೆ ತಮ್ಮ ಒಲವು ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು. ಬೆಳಗ್ಗೆ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ, ಮಾಜಿ ಸಂಸದ ಆರ್.ಎಸ್. ಪಾಟೀಲ ಹಾಗೂ ಸಹಸ್ರಾರು ಕಾರ್ಯಕರ್ತರ ಜತೆ ತೆರೆದ ವಾಹನದಲ್ಲಿ ಜಯಮಾಲ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಶೋಕ ಬಾಗಮಾರ, ವಿ.ಆರ್. ಗುಡಿಸಾಗರ, ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಸುಭಾನಸಾಬ ಆರಗಿದ್ದಿ, ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ್, ದತ್ತು ಬಾಕಳೆ, ಕೊಟ್ರೇಶ ಚಿಲಕಾ, ಮಾರ್ಕಂಡಯ್ಯ ನಂದನಜವಳೆಕರ, ಮಾರುತಿ ಕಲ್ಲೊಡ್ಡರ, ಎಫ್.ಎಸ್. ಕರಿದುರಗನವರ, ಪ್ರಶಾಂತ ರಾಠೋಡ, ರವಿ ಗಡೇದವರ, ಉಮೇಶ ರಾಠೋಡ, ಶಶಿಕಲಾ ಪಾಟೀಲ, ಸುಜಾತಾ ಚುಂಚಾ, ದೀಪಾ ಚನ್ನಿ, ಸವಿತಾ ಭಾಂಡಗೆ ಉಪಸ್ಥಿತರಿದ್ದರು.
ದೊಡ್ಡಮನಿ ಪರ ಮತಯಾಚನೆ
ಲಕ್ಷ್ಮೇಶ್ವರ: ಅಧಿಕಾರವಿದ್ದಾಗ ಕಚ್ಚಾಟದಲ್ಲಿಯೇ ಕಾಲ ಕಳೆದ ಬಿಜೆಪಿಯು ಜನರ ಸಮಸ್ಯೆಗೆ ಸ್ಪಂದಿಸದೆ ದುರಾಡಳಿತ ನೀಡಿದ್ದು, ರಾಜ್ಯದ ದೌರ್ಭಾಗ್ಯ ಎಂದು ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪಂಪ ವೃತ್ತದಿಂದ ರೋಡ್ ಶೋ ಮಾಡಿ, ನಂತರ ಪುರಸಭೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯವನ್ನು ಅಕ್ರಮ ಗಣಿಗಾರಿಕೆಯ ತಾಣವನ್ನಾಗಿ ಮಾಡಿ, ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವವರಿಗೆ ಮತ್ತೆ ಮತ ನೀಡಬೇಡಿ. ಮೇ 5 ರಂದು ತಮ್ಮ ಮತವನ್ನು ಕಾಂಗ್ರೆಸ್ಗೆ ನೀಡಿ ಬೆಂಬಲಿಸುವಂತೆ ಕೋರಿದರು. ಶಿರಹಟ್ಟಿ ತಾಲೂಕಿನ ಅಭಿವೃದ್ಧಿಯ ಕನಸು ಕಾಣುತ್ತಿರುವ ನನಗೆ ತಮ್ಮ ಬೆಂಬಲ ನೀಡುತ್ತೀರೆಂದು ಆಶಿಸುವೆ ಎಂದರು.
ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಪುರಸಭೆ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ, ತಾಪಂ ಸದಸ್ಯ ಚೆನ್ನಪ್ಪ ಜಗಲಿ, ಕಾಂಗ್ರೆಸ್ ಎಸ್.ಟಿ. ಘಟಕದ ರಾಜ್ಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿದರು. ಪುರಸಭೆಯ ಮಾಜಿ ಅಧ್ಯಕ್ಷ ವಿ.ಜಿ.ಪಡಗೇರಿ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ, ಅಡಿವೆಪ್ಪ ಬೆಟಗೇರಿ, ಶಿಗ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಪರಮೇಶ ಲಮಾಣಿ, ಬಸಣ್ಣ ಬೆಟಗೇರಿ, ಪೂರ್ಣಾಜಿ ಖರಾಟೆ, ಜಯಕ್ಕ ಕಳ್ಳಿ, ರಾಜು ಕುಂಬಿ, ಬಸವರಾಜ ಓದಾನವರ, ಸೋಮಣ್ಣ ಬೆಟಗೇರಿ, ಅಮರೇಶ ತೆಂಬದಮನಿ, ಬಸಣ್ಣ ಮಜ್ಜಿಗುಡ್ಡ, ನೀಲಪ್ಪ ಸೆರಸೂರಿ, ದಾದಾಪೀರ ಮುಚ್ಚಾಲೆ, ಕಿರಣ ನವಲೆ, ಅಬ್ದುಲ್ ರಿತ್ತಿ ಮುಂತಾದವರು ರೋಡ್ಶೋದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯಾಗಿಲ್ಲ
ಲಕ್ಷ್ಮೇಶ್ವರ: ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದ ಸಮಗ್ರ ಅಭಿವೃದ್ದಿಯಾಗಿದೆ. ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಒತ್ತು ನೀಡಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು. ಅವರು ಈಚೆಗೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿ ಸಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಹಿಂದಿನ ಯಾವುದೇ ಸರ್ಕಾರ ಮಾಡದಷ್ಟು ಅಭಿವೃದ್ದಿ ಕಾರ್ಯ ಮಾಡಿದೆ. ಬಡವರ ದೀನ ದಲಿತರ ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಶಿಕ್ಷಣ, ವಸತಿ ಯೋಜನೆ, ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ, ಮೀನುಗಾರಿಕೆ, ಹೈನುಗಾರಿಕೆ, ತಾಂಡಾಗಳ ಅಭಿವೃದ್ದಿ, ಪ.ಪಂಗಡ, ಜಾತಿಗಳ ಅಭಿವೃದ್ಧಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷೆ, ಬೈಸಿಕಲ್ ವಿತರಣೆ ಹೀಗೆ ರಾಜ್ಯದ ಪ್ರತಿಯೊಂದು ಕುಟುಂಬಗಳು ಬಿಜೆಪಿ ಸರ್ಕಾರದ ಪ್ರಯೋಜನ ಪಡೆದುಕೊಂಡಿವೆ. ಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಸುರೇಶ ನಂದೆಣ್ಣವರ, ನಾಗರಾಜ ಕುಲಕರ್ಣಿ, ಎಂ.ಬಿ. ಚೆಪ್ಪರಮನಿ, ಜಿ.ಆರ್. ಕೊಪ್ಪದ, ಪುರಸಭೆ ಮಾಜಿ ಉಪಾಧ್ಯಕ್ಷೆ ಗಂಗಮ್ಮ ನಂದೆಣ್ಣವರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

