ಗದಗ

ಪ್ರಚಾರಕ್ಕೆ ತೆರೆ: ದೇವರ ಮೊರೆ

Published On :

ಜಿಲ್ಲೆಯ ವಿವಿಧ ಮತಕ್ಷೇತ್ರಗಳಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಲಿ ಎಂದು ಕೆಲವರು ದೇವರಿಗೆ ದೀಡ ನಮಸ್ಕಾರ ಹಾಕುತ್ತಿದ್ದಾರೆ. ತಮ್ಮವರ ವಿಜಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಉರುಳು ಸೇವೆ ಮಾಡುತ್ತಿದ್ದಾರೆ. ಮಹಿಳೆಯರು ಆರತಿ ತಟ್ಟೆಗಳೊಂದಿಗೆ ದೇವಸ್ಥಾನಕ್ಕೆ ತೆರಳಿ, ತಮ್ಮ ಅಭ್ಯರ್ಥಿಯೇ ಗೆಲ್ಲಲ್ಲಿ ಎಂದು ಪೂಜೆ ಸಲ್ಲಿಸುತ್ತಿರುವುದು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಅಭಿಮಾನಿಗಳು ತಮ್ಮ ನಾಯಕರು ಗೆಲವು ಸಾಧಿಸಲಿ ಎಂದು ದೇವರಿಗೆ ಕಾಯಿಯನ್ನು ಕಟ್ಟಿ, ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ.
ದೇವಸ್ಥಾನಗಳಲ್ಲಿ ಜನವೋ ಜನ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳಿಂದ 47 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದು, ಅವರು ಹಾಗೂ ಅವರ ಹಿಂಬಾಲಕರು ಚುನಾವಣೆಯಲ್ಲಿ ಗೆಲುವು ನಮಗೆ ಸಿಗಲಿ ಎನ್ನುವ ಉದ್ದೇಶದಿಂದ ವಿಶೇಷ ಪೂಜೆ, ಆಚರಣೆ ಮಾಡುತ್ತಿರುವುದರಿಂದ ಜಿಲ್ಲೆಯ ಹಲವಾರು ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿವೆ. ಇನ್ನೊಂದು ಪ್ರಮುಖ ಅಂಶವೆಂದರೆ ಒಬ್ಬ ಅಭ್ಯರ್ಥಿ ಆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಅದೇ ದೇವಸ್ಥಾನದಲ್ಲಿಯೇ ಪೂಜೆಗೆ ಮುಂದಾಗುತ್ತಿರುವುದು ಮೌಢ್ಯದ ಪರಮಾವಧಿ ಎನ್ನಬೇಕೇ ಅಥವಾ ದೇವರ ಮೇಲಿನ ಅತಿಯಾದ ಭಕ್ತಿ ಎನ್ನಬೇಕು ಎನ್ನುವುದು ತಿಳಿಯದಂತಾಗಿದೆ.                                                 

ಬಿದರೂರ ರೋಡ್ ಶೋ
 ಗದಗ: ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಶುಕ್ರವಾರ ನಗರದಲ್ಲಿ ಬೃಹತ್ ರೋಡ್‌ಶೋ ನಡೆಸುವ ಮೂಲಕ ಮತಯಾಚಿಸಿದರು. ಒಕ್ಕಲಗೇರಿ ರಾಚೋಟೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ಗಂಜೀ ಬಸವೇಶ್ವರ ವೃತ್ತ, ಜನತಾ ಪ್ಲಾಟ್, ಖಾನತೋಟ, ಗಂಗಾಪುರ ಪೇಟೆ, ಗದಗ ಜವುಳ ಬಜಾರ, ಟಾಂಗಾಕೂಟ, ಗದಗ ಚಾವಡಿ, ಸೋಮೇಶ್ವರ ದೇವಸ್ಥಾನ, ಹನುಮನಗರಡಿ, ಹಾರಿಗೇರಿ ಓಣಿ, ತಿಳಕಪಾರ್ಕ್, ಬಸವೇಶ್ವರ ವೃತ್ತ, ವೀರಶೈವ ಲೈಬ್ರರಿ, ಹಳೇ ಬಸ್ ನಿಲ್ದಾಣದ ಮೂಲಕ ಸಂಚರಿಸಿ ಗದಗ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಮುಕ್ತಾಯಗೊಳಿಸಲಾಯಿತು.  ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಎಂ.ಎಂ. ಹಿರೇಮಠ, ಶಿರಾಜ ಬಳ್ಳಾರಿ, ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ವಿನಾಯಕ ಮಾನ್ವಿ, ಪತ್ತಾರ, ಪ್ರವೀಣ ಬನ್ಸಾಲಿ, ಮೋಹನ ಮಾಳಶೆಟ್ಟಿ, ಜಗನ್ನಾಥ ಭಾಂಡಗೆ, ಬಸವರಾಜ ಹಡಪದ, ಪರಶುರಾಮ ಹೆಬಸೂರ, ಛಗನ ರಾಜಪೂರೋಹಿತ, ಆರ್.ಎಂ. ಹಿರೇಮಠ, ರಮೇಶ, ಕುಮಾರಸ್ವಾಮಿ ಹಿರೇಮಠ, ರವಿ ಓಬಾಜಿ, ಕುರ್ತಕೋಟಿ, ವೀರನಗೌಡ ಮರಿಗೌಡ್ರ, ಬಸವರಾಜ ಶೀರಿ, ರಮೇಶ ಬಾಳಪ್ಪನವರ, ಹನುಮಂತಪ್ಪ ಶಾಂತಗೇರಿ ಇದ್ದರು.

ಬಿಎಸ್ಸಾರ್ ಭರ್ಜರಿ ಪ್ರಚಾರ
ಕನ್ನಡಪ್ರಭ ವಾರ್ತೆ, ಗದಗ, ಮೇ 3
ಗದಗ ವಿಧಾನಸಭಾ ಮತಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ಬೃಹತ್ ರೋಡ್ ಶೋ ನಡೆಸಿದರು. ವೀರೇಶ್ವರ ಪುಣ್ಯಾಶ್ರಮದಿಂದ ಪ್ರಾರಂಭವಾದ ಮೆರವಣಿಗೆ ವೆಂಕಟೇಶ ಚಿತ್ರಮಂದಿರ ಮಾರ್ಗದ ಮೂಲಕ ಪಂ. ಪುಟ್ಟರಾಜ ಕವಿ ಗವಾಯಿಗಳವರ ವೃತ್ತ, ರೋಟರಿ ವೃತ್ತ, ಗಾಂಧಿ ವೃತ್ತ, ಹೆಲ್ತ್ ಕ್ಯಾಂಪ್, ಅಂಬಾಭವಾನಿ ವೃತ್ತದ ಮೂಲಕ ಬೆಟಗೇರಿಯ ಟೆಂಗಿನಕಾಯಿ ಬಜಾರದ ವರೆಗೆ ಸಾಗಿತು.
ಸಾವಿರಾರು ಮಹಿಳೆಯರು, ಅಭಿಮಾನಿಗಳು ಬಿಸಿಲಿನ್ನೂ ಲೆಕ್ಕಿಸದೆ ರೋಡ್ ಶೋದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಎಸ್ಸಾರ್ ಸಂಸ್ಥಾಪಕ ಶ್ರೀರಾಮುಲು ಸಾಕಷ್ಟು ಪ್ರಭಾವ ಹೊಂದಿದ್ದು, ಅವರ ಅಭಿಮಾನಿಗಳು, ಪಕ್ಷದ ಕಾಯಕರ್ತರು ಹಾಗೂ ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಸದಸ್ಯ ಸಂತೋಷ ಮೇಲಗಿರಿ, ನಾಗಲಿಂಗ ಐಲಿ, ಶ್ರೀನಿವಾಸ ಕರಿ, ಜಯಶ್ರೀ ಭೈರವಾಡೆ, ಮಂಜುನಾಥ ಮುಳಗುಂದ, ಶ್ಯಾಮಸನ್, ಎಸ್.ಟಿ. ಮೇಲಗಿರಿ, ಮೌಲಾಸಾಬ ಮಾನ್ವಿ ಪಾಲ್ಗೊಂಡಿದ್ದರು.  ಅವಳಿ ನಗರದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು.

ಎಚ್.ಕೆ. ಪಾಟೀಲ ಮತಯಾಚನೆ
ಗದಗ: ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲರಿಂದ ಶುಕ್ರವಾರ ನಗರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ನಗರದ ಹುಡ್ಕೋ ಕಾಲೋನಿಯ ನೀಲಮ್ಮತಾಯಿ ಮಠದಿಂದ ಆರಂಭವಾದ ರೋಡ ಶೋ ನಗರದ ಪ್ರಮುಖ ಬೀದಿಗಳಾದ ಆಂಜನೇಯ ದೇವಸ್ಥಾನ, ಮುಳಗುಂದ ನಾಕಾ, ಕೆಇಬಿ, ಜೋಡ ಮಾರುತಿ ದೇವಸ್ಥಾನ, ರಾಚೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ಜವಳಿಗಲ್ಲಿ ಗೌರಿಶಂಕರ ಲಾಡ್ಜ್, ಮಹೇಂದ್ರಕರ ವೃತ್ತ, ಕೆಸಿಸಿ ಬ್ಯಾಂಕ್, ಕೆ.ಸಿ.ರಾಣಿ ರೋಡ್, ಚೇತನಾ ಕ್ಯಾಂಟೀನ್, ಕೆ.ಎಚ್. ಪಾಟೀಲ ಸ್ಟೇಡಿಯಂ, ರೋಟರಿ ವೃತ್ತ, ಟಾಂಗಾಕೂಟ, ನಾಮಜೋಶಿ ರೋಡ್ ಮೂಲಕ ಹಾಯ್ದು ಹತ್ತಿಕಾಳ ಕೂಟದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಂಡಿತು. ತೆರೆದ ವಾಹನದಲ್ಲಿ ಅಭ್ಯರ್ಥಿ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ, ಅಕ್ಬರಸಾಬ ಬಬರ್ಚಿ, ಜಾಕೀರ ಮುಜಾವರ, ಎಂ.ಸಿ. ಶೇಖ, ನಿಂಗಪ್ಪ ಪಡಗದ, ಸಿ.ಎಂ. ಹುಲಗೂರ, ಬಸಣ್ಣ ಮಲ್ಲಾಡದ, ಬರಕತ್‌ಅಲಿ ಮುಲ್ಲಾ, ಅನಿಲ ಸಿಂಗಟಾಲಕೇರಿ ಮುಂತಾದವರು ಇದ್ದರು.  ರೋಡ್ ಶೋದಲ್ಲಿ ರಾಮಣ್ಣ ಫಲದೊಡ್ಡಿ, ಎಸ್.ಜಿ. ಹಿರೇಗೌಡ್ರ, ಶಿವಣ್ಣ ಮುಳಗುಂದ, ಜಿಪಂ ಸದಸ್ಯ ರೇವಣೆಪ್ಪ ಕೊಂಡಿಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಜೆಡಿಎಸ್ ಗೆಲ್ಲಿಸಿ: ಹೊರಟ್ಟಿ ಮನವಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 3
ನಿಮ್ಮ ನಿರೀಕ್ಷೆಗಳು ನಿಜವಾಗಬೇಕಾದರೆ ಈ ಬಾರಿ ನೀವು ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತದಾರರಲ್ಲಿ ವಿನಂತಿಸಿದರು.
ಗುರುವಾರ ಪಟ್ಟಣದಲ್ಲಿ ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಪರ ಚಕ್ಕಡಿಯ ಮೆರವಣಿಗೆ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್, ಬಿಜೆಪಿಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ನಿಮಗೆ ಮನವರಿಕೆಯಾಗಿದೆ. ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿರುವ ನೀವು ಈ ಬಾರಿ ಜೆಡಿಎಸ್ ಆಡಳಿತ ನೋಡಿ. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೇಮಗಿರೀಶ ಹಾವಿನಾಳರಿಗೆ ಮತ ನೀಡುವ ಮೂಲಕ ಅಭಿವೃದ್ಧಿಯ ಹರಿಕಾರ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಹಕರಿಸಿ ಎಂದರು. ಚಕ್ಕಡಿಯ ರೋಡ್ ಶೋ ಜನತೆಯ ಗಮನ ಸೆಳೆಯಿತು. ರೋಣ ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಣ್ಣ ಸಕ್ರೋಜಿ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಣುಕಾ ನಾಯ್ಕರ, ಮುಂಡರಗಿ, ರೋಣ, ಗದಗ ಭಾಗಗಳಿಂದ ಆಗಮಿಸಿದ್ದ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.