ಗದಗ

ಜಾತ್ರೆಗಳು ಸಮಾಜದ ಏಕತೆ ಸಾರುವ ಕೇಂದ್ರಗಳಾಗಲಿ

Published On :

ಗದಗ: ಜಾತ್ರೆಗಳು ಕೇವಲ ಆಚರಣೆಯ ವಸ್ತುವಾಗದೇ ಸಮಾಜದಲ್ಲಿನ ಎಲ್ಲ ಜನಾಂಗದ ಜನರನ್ನು ಒಗ್ಗೂಡಿಸಿ ಐಕ್ಯತೆ ಸಾರುವ ಕೇಂದ್ರಗಳಾಗಿ ಹೊರಹೊಮ್ಮಬೇಕಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಈಚೆಗೆ ಅವರು ಸ್ಥಳೀಯ ಜ. ತೋಂಟದಾರ್ಯ ಜಾತ್ರೆಯ ಪ್ರಾರಂಭೋತ್ಸವದಲ್ಲಿ ಬೆಳಗಾವಿಯ ಕನ್ನಡದ ಪ್ರಥಮ ಮೇಯರ್, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ. ಸಿದ್ಧನಗೌಡ ಪಾಟೀಲ ಹಾಗೂ ಲೇಖಕ ಡಾ. ಸರಜೂ ಕಾಟ್ಕರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಜಾತ್ರೆಗಳು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜಾತಿಯ ಜನರ ಪ್ರೀತಿಗಳಿಸುವ ಮೂಲಕ ಜನರಲ್ಲಿ ಜಾತಿ ಕುರಿತು ಇರುವ ಭೇದ-ಭಾವವನ್ನು ಹೊಡೆದೋಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಡಾ. ಸಿದ್ಧನಗೌಡ ಪಾಟೀಲ ಮಾತನಾಡಿ, ಜನರು ಯಾವುದೋ ಸಾಧನೆಗಾಗಿ ಡಾಕ್ಟರೇಟ್ ಗೌರವ ಪಡೆಯುತ್ತಾರೆ. ನನಗೆ ಎರಡು ದಶಕಕ್ಕಿಂತಲೂ ಹೆಚ್ಚು ಬೆಳಗಾವಿಯಂತಹ ಗಡಿಭಾಗದಲ್ಲಿ ಕನ್ನಡಕ್ಕಾಗಿ ಸೇವೆ ಮಾಡಿದ್ದರಿಂದ ಡಾಕ್ಟರೇಟ್ ಪದವಿ ಬಂದಿದೆ. ಗದುಗಿನ ತೋಂಟದ ಶ್ರೀಗಳಿಂದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಸನ್ಮಾನಗೊಳ್ಳುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಲೇಖಕ ಡಾ. ಸರಜೂ ಕಾಟ್ಕರ್ ಮಾತನಾಡಿ, ಡಾಕ್ಟರೇಟ್ ಪಡೆದ ನಿಮಿತ್ತ ಶ್ರೀಮಠದ ವೇದಿಕೆಯಲ್ಲಿ ಸಂಮಾನಗೊಳ್ಳುತ್ತಿರುವುದು ತಮಗೆ ಸಂತಸ ತಂದಿದ್ದು, ತಾವೊಬ್ಬ ಬಂಡಾಯ ಸಾಹಿತಿಯಾಗಿದ್ದು, ಮಠಗಳಿಂದ ಯಾವತ್ತೂ ದೂರ ಇರುವಂಥವರು. ಆದರೆ ಇಂದು ಗದುಗಿನ ತೋಂಟದಾರ್ಯ ಮಠದಲ್ಲಿ ಸನ್ಮಾನ ಪಡೆದಿರುವುದು ಬಂಡಾಯಗಾರರಿಂದಲೇ ಪಡೆದಂತಾಗಿದೆ. ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಕೆಟ್ಟದ್ದಕ್ಕೆ ಬಂಡಾಯವೇಳುವ ಪ್ರವೃತ್ತಿಯವರೇ ಎಂದು ಅಭಿಪ್ರಾಯಪಟ್ಟರು.
ಗೊಳಸಂಗಿಯ ಹಿಂದೂ-ಮುಸ್ಲಿಂ ಭಾವೈಕ್ಯ ನಿಧಿಯ ಕಾಶೀಂಸಾಬ ಬಿಜಾಪುರ ಮಾತನಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ನಾಡಿನ ಎಲ್ಲ ಧರ್ಮಗಳು ಒಂದೇ ಸಾರವನ್ನು ಹೇಳುತ್ತವೆ. ಜನಪ್ರತಿನಿಧಿಗಳು ಜನರಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಬಸವ, ಬುದ್ಧ, ಮಹಾವೀರ, ಕನಕದಾಸ, ಅಶೋಕ, ಅಕ್ಬರ, ಕಬೀರರು, ವಿವೇಕಾನಂದರ ಹಿತನುಡಿಗಳಂತೆ ನಾವೆಲ್ಲರೂ ಒಂದೇ ಕುಲದವರು ಎಂದು ಮಾರ್ಮಿಕವಾಗಿ ನುಡಿದರು. ಜಾತ್ರಾ ಮಹೋತ್ಸವದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ಹಾಗೂ ಕ್ಷಮಾ ಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.