ಗದಗ

ಗುಂಡೇಟು ಪ್ರಕರಣ: ವಿರೋಧ ಪಕ್ಷಕ್ಕೆ ವರ?

Published On :

ಗದಗ: ಗನ್ ಮ್ಯಾನ್ ಅಚಾತುರ್ಯದಿಂದಾಗಿ ಗುಂಡು ತಗುಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸಿ.ಸಿ. ಪಾಟೀಲ ಚುನಾವಣೆಯಲ್ಲಿ ಸೋಲನುಭವಿಸಿದ್ದು, ಅವರ ಗುಂಡೇಟು ಪ್ರಕರಣವೇ ವಿರೋಧ ಪಕ್ಷಕ್ಕೆ ವರವಾಯಿತೇ ಎನ್ನುವುದು ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ. ಜಿಲ್ಲೆಯಲ್ಲಿಯೇ ಈ ಬಾರಿಯ ಚುನಾವಣೆಯಲ್ಲಿ ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸುವ ಸಾಧ್ಯತೆ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆದದ್ದೇ ಬೇರೆ.  ಗುಂಡೇಟಿನ ಘಟನೆ ನಂತರ ಪಾಟೀಲರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಫತ್ರೆಗೆ ದಾಖಲಿಸಲಾಯಿತು. ಇದು ಸಹಜವಾಗಿ ಬಿಜೆಪಿ ಕಾರ್ಯಕರ್ತರಲ್ಲಿಯೇ ಗೊಂದಲಕ್ಕೆ ಕಾರಣವಾಯಿತು. ಅವರ ಗುಂಡೇಟು ಪ್ರಕರಣದಿಂದ ಬಿಜೆಪಿ ಪರ ಅನುಕಂಪದ ಅಲೆ ಸೃಷ್ಟಿಯಾಗಲಿದೆ ಎನ್ನುವ ವಿಶ್ವಾಸ ಎಲ್ಲರಲ್ಲಿಯೂ ಮೂಡಿತ್ತು. ಆದರೆ, ಇದನ್ನೇ ಸಮರ್ಥವಾಗಿ ಬಳಕೆ ಮಾಡಿಕೊಂಡ ವಿರೋಧ ಪಕ್ಷಗಳು, ಸಿ.ಸಿ. ಪಾಟೀಲ ಆರೋಗ್ಯದಲ್ಲಿ ಸಾಕಷ್ಟು ಏರು ಪೇರಾಗಿದೆ. ಅವರು ಮರಳಿ ಕ್ಷೇತ್ರಕ್ಕೆ ಬರುವುದು ಸಾಕಷ್ಟು ವಿಳಂಭವಾಗುತ್ತದೆ. ಅವರು ಬಂದರೂ ಅಷ್ಟೊಂದು ಬೇಗನೆ ಕ್ಷೇತ್ರದಲ್ಲಿ ಸಂಚರಿಸಿ, ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇದೊಮ್ಮೆ ನಮಗೂ ಅವಕಾಶ ನೀಡಿರಿ ಎನ್ನುವುದನ್ನೇ ಪ್ರಮುಖವಾಗಿ ಪ್ರಚಾರದಲ್ಲಿ ಬಳಸಿಕೊಂಡದ್ದೇ ವಿರೋಧ ಪಕ್ಷಗಳಿಗೆ ವರವಾಗಿ ಪರಿಣಮಿಸಿದಂತಾಗಿದೆ. ಸಿ.ಸಿ. ಪಾಟೀಲ ಗುಂಡೇಟಿನಿಂದ ಗಾಯಗೊಂಡ ನಂತರ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಚುನಾವಣೆ ಏನೋ ಮಾಡಿದರು. ಆದರೆ, ಕ್ಷೇತ್ರದಲ್ಲಿ ಒಮ್ಮೆಯೂ ಸಿ.ಸಿ. ಪಾಟೀಲ ಬಹಿರಂಗವಾಗಿ ಪ್ರಚಾರ ಮಾಡದೇ ಇರುವುದು ವಿರೋಧ ಪಕ್ಷಗಳ ಹೇಳಿಕೆಗೆ ಪೂರಕ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.