ಗದಗ

ಸಂವಿಧಾನವೇ ಪವಿತ್ರ ಗ್ರಂಥ: ತೋಂಟದ ಶ್ರೀ

Published On :

ಗದಗ: ನಮ್ಮ ಪ್ರಜಾಪ್ರಭುತ್ವ ದೇಶ, ಇಲ್ಲಿನ ಪ್ರತಿಯೊಬ್ಬರಿಗೂ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಇದನ್ನು ಎಲ್ಲರೂ ಅರಿತು ಸಂವಿಧಾನದ ಚೌಕಟ್ಟಿನಲ್ಲಿಯೇ ಬದುಕಬೇಕು. ಸಂವಿಧಾನಕ್ಕೆ ಅಗೌರವ ತೋರುವವರನ್ನು ತಕ್ಷಣವೇ ಜೈಲಿಗೆ ಅಟ್ಟಬೇಕು ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜರುಗಿದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಡಾ. ಬಿ.ಆರ್. ಅಂಬೇಡ್ಕರ ರಚಿಸಿರುವ ಭಾರತ ಸಂವಿಧಾನವನ್ನು ಅಗೌರವ ತೋರುವ ಜನಪ್ರತಿನಿಧಿಗಳನ್ನು ಯಾವುದೇ ಮುಲಾಜಿಲ್ಲದೇ ಜೈಲಿಗೆ ಕಳುಹಿಸಿ ಬುದ್ದಿ ಕಲಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಚೆಗೆ ಲೋಕಸಭೆಯಲ್ಲಿ ಉತ್ತರಪ್ರದೇಶದ ಸಂಸದ ಶಫಿಕರ್ ರೆಹಮಾನ್ ಬರ್ಖಾ ಸಂಸತ್ನಲ್ಲಿ ವಂದೇ ಮಾತರಂ ಗೀತೆಗೆ ಗೌರವ ನೀಡದ್ದು ಸಂವಿಧಾನಕ್ಕೆ ಅವಮಾನ ಮಾಡಿದಂತೆ, ಅಂತಹವರನ್ನು ಬಚಾವ್ ಮಾಡಿ ಮತಬ್ಯಾಂಕ್ಗಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸಬಾರದು.
ನಮ್ಮದು ಜಾತ್ಯಾತೀತ ರಾಷ್ಟ್ರ, ಇಲ್ಲಿ ಎಲ್ಲ ಸಮುದಾಯ, ಜಾತಿಯವರು ಒಟ್ಟಿಗೆ ಬಾಳುತ್ತೇವೆ. ಒಟ್ಟಿಗೆ ಬಾಳಲು ನಮಗೆ ಅಂಬೇಡ್ಕರ ನೀಡಿದ ಸಂವಿಧಾನವಿದೆ. ಈ ಸಂವಿಧಾನಕ್ಕೆ ಅಗೌರವ ತೋರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾದರೂ ಅವರೆಲ್ಲಾ ಕಾನೂನಿನ ದೃಷ್ಟಿಯಲ್ಲಿ ಒಂದೇ ಅಂತವರನ್ನು ತಕ್ಷಣವೇ ಜೈಲಿಗೆ ಕಳುಹಿಸಬೇಕು.
ದೇಶದಲ್ಲಿರುವ ಎಲ್ಲ ಮಠಗಳು ಹಾಗೂ ಮಂದಿರಗಳಿಗಿಂತ ದೇಶದ ಆಡಳಿತವನ್ನು ನಡೆಸುವ ಸಂಸತ್ ಭವನ ಶ್ರೇಷ್ಠ ಮಠವಾಗಿದೆ. ಎಲ್ಲ ಧರ್ಮದವರಿಗೂ ಒಂದೇ ಹಕ್ಕನ್ನು ನೀಡಿರುವ ಸಂವಿಧಾನ ಎನ್ನುವ ಗ್ರಂಥ ಭಾರತದಲ್ಲಿರುವ ಪ್ರತಿಯೊಬ್ಬನ ಪವಿತ್ರ ಗ್ರಂಥವಾಗಿದೆ. ಇದನ್ನು ಸಂಸತ್ ಭವನದಲ್ಲಿ ಓರ್ವ ಸಂಸದ ಈ ರೀತಿ ವರ್ತನೆ ಮಾಡಿದ್ದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಸಂವಿಧಾನದಲ್ಲಿ ಮಾತನಾಡಲು ಸ್ವಾತಂತ್ರ್ಯ ಇದೆ ಎಂದು ತಮಗೆ ಮನಬಂದಂತೆ ಮಾತನಾಡುವದು ಸರಿಯಲ್ಲ. ಮಾತನಾಡುವಾಗ ಎಚ್ಚರ ವಹಿಸಬೇಕು. ನಮ್ಮ ದೇಶದಲ್ಲಿ ಮುಸ್ಲಿಂರಿಗೆ ನೀಡಿರುವಷ್ಟು ಸ್ವಾತಂತ್ರ್ಯ ಬೇರೆ ದೇಶದಲ್ಲಿ ಇಲ್ಲ. ಈ ಕುರಿತು ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಬೇಕು. ಸಂವಿಧಾನ ಗೌರವಿಸಿ ಅದರಂತೆ ನಡೆದುಕೊಳ್ಳಬೇಕು ಎಂದ ಅವರು, ಇಂದಿನ ಈ ಭ್ರಷ್ಟ ವ್ಯವಸ್ಥೆ ಸರಿಪಡಿಸಲು ಬಸವಣ್ಣವರ ತತ್ವ ವಿಚಾರಧಾರೆಗಳು ಪ್ರತಿಯೊಬ್ಬರಿಗೆ ಬೇಕಾಗಿದೆ ಎಂದು ತಿಳಿಸಿದರು.
ಧಾರವಾಡದ ಕಾನೂನು ವಿಶ್ವವಿದ್ಯಾಲಯದ ನಿವೃತ ಉಪಕುಲಪತಿ ಜೆ.ಎಸ್. ಪಾಟೀಲ, ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ಕುಮಾರ್, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಸಿಇಓ ವೀರಣ್ಣ ತುರಮರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬನಶಂಕರಿ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.