ಗದಗ

ಹುದ್ದೆಗೆ ಗೆದ್ದವರ ಲಾಬಿ ಸೋತವರು ಮನೆಯಲ್ಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 16
ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಿಂದ ಕಳೆದ 3 ತಿಂಗಳಿಂದ ಚುನಾವಣೆಯ ಭರಾಟೆಯಲ್ಲಿಯೇ ಮುಳುಗಿದ್ದ ಜನತೆಗೆ ಮೇ 8ರ ವಿಧಾನ ಸಭೆಯ ಫಲಿತಾಂಶದ ನಂತರ ಜಿಲ್ಲೆಯಾದ್ಯಂತ ಎಲ್ಲ ರಾಜಕೀಯ ಚಟುವಟಿಕೆ ಸಂಪೂರ್ಣ ಸ್ತಬ್ದಗೊಂಡಿದ್ದು, ಒಂದು ರೀತಿಯಲ್ಲಿ ರಭಸದ ಮಳೆಯಾಗಿ ನಿಂತು ಹೋದ ಅನುಭವ ಪ್ರತಿಯೊಬ್ಬರಿಗೂ ವ್ಯಕ್ತವಾಗುತ್ತಿದೆ. ಗೆಲವು ಸಾಧಿಸಿದ ಶಾಸಕರು ಮಂತ್ರಿಗಿರಿಗಾಗಿ ಬೆಂಗಳೂರು, ದೆಹಲಿಯಲ್ಲಿ ಬೀಡು ಬಿಟ್ಟಿದ್ದರೆ, ಸೋತ ಅಭ್ಯರ್ಥಿಗಳು ಮನೆಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಈ ಬಾರಿ ಚುನಾವಣಾ ಆಯೋಗ ಅತ್ಯಂತ ಕಡಿಮೆ ಅಂತರದಲ್ಲಿ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಯನ್ನೂ ನಡೆಸಿದೆ. ಫೆ. 14 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಿ, ಮಾರ್ಚ್ 11 ರಂದು ಮತ ಎಣಿಕಾ ಕಾರ್ಯವೂ ನಡೆಯಿತು. ಬಳಿಕ ಮಾರ್ಚ್ 20 ರಿಂದ ಮೇ 8 ರವರೆಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ 2 ಮಹತ್ತರವಾದ ಚುನಾವಣೆಯನ್ನು ನಡೆಸಿತ್ತು. ಇದರಿಂದ ಅನಿವಾರ್ಯವಾಗಿ ಕಾರ್ಯಕರ್ತರು ಬಿಡುವಿಲ್ಲದೇ ಕೆಲಸ ಮಾಡುವಂತಾಗಿತ್ತು.
ಮಳೆಯಾಗಿ ನಿಂತ ಅನುಭವ: ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ, ಫಲಿತಾಂಶವನ್ನು ಪಕ್ಷಗಳು ಅರಗಿಸಿಕೊಳ್ಳುವ ಮೊದಲೇ ವಿಧಾನಸಭೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಬಿರುಸಿನ ರಾಜಕೀಯ ಚಟುವಟಿಕೆ ನಡೆದವು. ಮೇ 8 ರಂದು ವಿಧಾನಸಭೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸಂಪೂರ್ಣ ಮುಖಭಂಗ ಅನುಭವಿಸಿತು. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಲಯ ಕಂಡುಕೊಂಡಿತು. ಕಳೆದ ಮೂರು ತಿಂಗಳಿಂದ ಎಲ್ಲಿ ನೋಡಿದರೂ ಚುನಾವಣೆಯದ್ದೇ ಮಾತು. ಫಲಿತಾಂಶ, ಪ್ರಚಾರದ್ದೇ ಚರ್ಚೆ ನಡೆಯುತ್ತಿತ್ತು. ಆದರೆ, ಕಳೆದ ಒಂದು ವಾರದದಿಂದ ಎಲ್ಲವೂ ಸಂಪೂರ್ಣ ಸ್ಥಗಿತಗೊಂಡಿದ್ದು, ರಭಸದ ಮಳೆಯಾಗಿ ನಿಂತ ಅನುಭವ ಜಿಲ್ಲೆಯಲ್ಲಿ ಕಂಡು ಬರುತ್ತಿದೆ.
ಗೆದ್ದವರು ಊರಲಿಲ್ಲ: ಆಡಳಿತಾರೂಢ ಬಿಜೆಪಿಯನ್ನು ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಿ, ಜಿಲ್ಲೆಯ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕರು ಮೇ 9 ರಂದೇ ತಮ್ಮ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಅವರು ಬೆಂಗಳೂರು ಸೇರಿಕೊಂಡು ವಾರ ಗತಿಸಿದರೂ ಮರಳಿ ಕ್ಷೇತ್ರದತ್ತ ಬಂದಿಲ್ಲ. ಜಿಲ್ಲೆಯ ಕೆಲ ಗ್ರಾಮೀಣ ಭಾಗದಲ್ಲಿನ ಕಾರ್ಯಕರ್ತರು, ಅಭಿಮಾನಿಗಳು ನಮ್ಮ ಶಾಸಕ ನಮ್ಮೂರಿಗೆ ಬಂದರೆ ಅವರನ್ನು ಮೆರವಣಿಗೆ, ವಿಜಯೋತ್ಸವ ಮಾಡಬೇಕೆನ್ನುವ ತವಕದಲ್ಲಿದ್ದಾರೆ. ಆದರೆ, ಶಾಸಕರುಗಳು ಮಾತ್ರ ಇವರ ಬಳಿಗೆ ಬರುತ್ತಿಲ್ಲ.
ಆತ್ಮಾವಲೋಕನ: ಗೆದ್ದವರು ಬೆಂಗಳೂರು ಸೇರಿದರೆ, ಸೋತವರು ತಮ್ಮ ತಮ್ಮ ಮನೆಗಳಲ್ಲಿ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಸೋಲಿನ ಬಗ್ಗೆ ಆತ್ಮಾವಲೋಕನ, ಪರಾಮರ್ಶೆ, ಚುನಾವಣೆ ಎದುರಿಸುವಲ್ಲಿ ಆಗಿರುವ ಲೋಪಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಪ್ರತಿ ದಿನವೂ ಬೇರೆ ಬೇರೆ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರ್ಯಕರ್ತರು ಸೋತ ನಾಯಕರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಸಮಸ್ಯೆ ಕೇಳುವವರ್ಯಾರು? ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದು ಫಲಿತಾಂಶ ಬಂದಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗದೇ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿಯೂ ಆಡಳಿತ ಮಂಡಳಿ ಇಲ್ಲ. ಇನ್ನು ಶಾಸಕರಾಗಿ ಆಯ್ಕೆಯಾದವರೆಲ್ಲ ಬೆಂಗಳೂರಿನಲ್ಲಿದ್ದಾರೆ. ಹಾಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಹಲವಾರು ದಿನಗಳಿಂದ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯೂ ಚುನಾವಣಾ ಕಾರ್ಯದಲ್ಲಿ ಮಗ್ನರಾಗಿದ್ದರಿಂದ ಜಿಲ್ಲೆಯಾದ್ಯಂತ ಸ್ವಚ್ಛತೆ, ಕೆಲವೆಡೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹಲವಾರು ಸಮಸ್ಯೆಗಳು ಉದ್ಭವಿಸಿದ್ದು, ಜನರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವವರೇ ಇಲ್ಲದಂತಾಗಿದೆ.

 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.