ಗದಗ

ಮತ್ತೆ ಕಾಣಿಸಿಕೊಂಡ ಚಿಕೂನ್ ಗುನ್ಯಾ

Published On :

ಕನ್ನಡಪ್ರಭ ವಾರ್ತೆ, ಗದಗ/ನರೇಗಲ್ಲ, ಮೇ 20
ಈ ಹಿಂದೆ (2007) ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿಕೂನ್ ಗುನ್ಯಾ ಕಾಯಿಲೆ ಕಳೆದ ಮಾರ್ಚ್‌ನಲ್ಲಿ ಜಿಲ್ಲೆಯ ರೋಣ ತಾಲೂಕಿನ ಕಳಕಾಪೂರ ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಈಗ ಮತ್ತೆ ಇದೇ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ 10 ದಿನಗಳಿಂದ ಕಾಣಿಸಿಕೊಂಡಿದ್ದು, 35ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ನರಳುತ್ತಿದ್ದು, ಪಟ್ಟಣದ ಜನರಲ್ಲಿ ಆತಂಕವನ್ನುಂಟು ಮಾಡಿದೆ.
2007ರಲ್ಲಿ ತೀವ್ರ ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಳೆಆಲೂರ ಸುತ್ತಮುತ್ತಲ 13ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತ್ತವಾಗಿ ಜನರು ಸಂಕಷ್ಟ ಎದುರಿಸಿದ್ದರು. ಪ್ರವಾಹ ಇಳಿಮುಖವಾದ ನಂತರ ಅಲ್ಲಲ್ಲಿ ನಿಂತ ಕಲುಷಿತ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಯಿಂದ ಹಲವಾರು ಜನರಿಗೆ ನಿಗೂಢ ಕಾಯಿಲೆ ಹೆಸರಿನಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ತಿಂಗಳಾನುಗಟ್ಟಲೆ ಆರೋಗ್ಯ ಇಲಾಖೆ ಶ್ರಮಿಸಿದ ನಂತರ ಈ ಕಾಯಿಲೆಯ ಸ್ವರೂಪ ಮತ್ತು ಹೆಸರು ಬಹಿರಂಗಗೊಂಡಿತು. ಈಗಾಗಲೇ ಮಾರ್ಚ್ ತಿಂಗಳಲ್ಲಿ ಕಳಕಾಪೂರ ಗ್ರಾಮದಲ್ಲಿ ಕಾಣಿಸಿಕೊಂಡು ಕಣ್ಮರೆಯಾಗಿದ್ದ ಈ ಚಿಕೂನ್ ಗುನ್ಯಾ ಈಗ ಮತ್ತೆ ರೋಣ ತಾಲೂಕಿನ ಕೊನೆಯ ಪಟ್ಟಣವಾಗಿರುವ ನರೇಗಲ್ಲನಲ್ಲಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಪಟ್ಟಣದ ಜನರು ಭಯಭೀತರಾಗಿದ್ದಾರೆ.
ಬೇಸಿಗೆಯಲ್ಲಿ ಇದರ ಪ್ರಭಾವ ಹೆಚ್ಚು: ಚಿಕೂನ್ ಗುನ್ಯಾ ಹೆಚ್ಚಾಗಿ ಬೇಸಿಗೆ ಕಾಲದಲ್ಲಿಯೇ ತನ್ನ ಪ್ರಭಾವ ತೋರಿಸುತ್ತದೆ. ಏಕೆಂದರೆ ಜಿಲ್ಲೆಯಲ್ಲಿ ಬೇಸಿಗೆಯ ಪ್ರಖರತೆಯಿಂದಾಗಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದ್ದು, ಕುಡಿಯುವ ನೀರಿಗೂ ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿರುತ್ತದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಬರುವ ನೀರನ್ನು ಸಾರ್ವಜನಿಕರು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಈ ಚಿಕೂನ್ ಗುನ್ಯಾ ರೋಗ ಹರಡುವ ಸೊಳ್ಳೆಗಳು ಶುದ್ಧ ನೀರಿನಲ್ಲಿಯೇ ತನ್ನ ಸಂತಾನಾಭಿವೃದ್ಧಿಯನ್ನು ಪ್ರಾರಂಭಿಸುತ್ತಿದ್ದು, ತಿಂಗಳುಗಟ್ಟಲೆ ಸಂಗ್ರಹಿಸುವ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಮೂಲಕ ರೋಗವನ್ನು ಹರಡುತ್ತಿವೆ. ಬೇಸಿಗೆಯ ಪ್ರಕರತೆಗೆ ಬಳಲುತ್ತಿರುವ ಜನರಿಗೆ ಈ ಚಿಕೂನ್‌ಗುನ್ಯಾ ರೋಗವು ಒಂದು ಕಂಟಕವಾಗಿ ಬಂದೊದಗಿದೆ.
ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ: ಕಳೆದ ಕೆಲ ತಿಂಗಳುಗಳ ಹಿಂದೆ ರೋಣ ತಾಲೂಕಿನ ಕಳಕಾಪೂರ ಗ್ರಾಮದಲ್ಲಿ ಕಾಣಿಸಿಕೊಂಡು ಅಲ್ಲಿನ ಜನರನ್ನು ಹಿಂಡಿ ಸಿಪ್ಪೆ ಮಾಡಿ ಕಣ್ಮರೆಯಾಗಿದ್ದ ಈ ಚಿಕೂನ್ ಗುನ್ಯಾ ಈಗ ಮತ್ತೆ ಇದೇ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಇಲ್ಲಿನ 35 ಕ್ಕೂ ಹೆಚ್ಚು ಜನರಿಗೆ ಈ ರೋಗವು ಕಾಣಿಸಿಕೊಂಡಿದ್ದು, ಇದರಿಂದಾಗಿ ಪಟ್ಟಣದ ಜನತೆ ಭಯಭೀತರಾಗಿದ್ದಾರೆ. ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ ಕಾಯಿಲೆ ಜಿಲ್ಲೆಯಾದ್ಯಂತ ವ್ಯಾಪಿಸುವ ಲಕ್ಷಣಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.