ದುಷ್ಪರಿಣಾಮ ಬೀರುವ ಕೈಗಾರಿಕೆಗಳು ಬೇಡ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 22
ನಮ್ಮ ಸುತ್ತಮುತ್ತಲಿನ ಜನತೆಯ ವಾಸ್ತವ್ಯಕ್ಕೆ ಹಾಗೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ದೊಡ್ಡ ಕೈಗಾರಿಕೆಗಳು ನಮ್ಮಲ್ಲಿ ಬೇಡ ಎಂದು ಗದಗ-ಡಂಬಳ ಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಮಂಗಳವಾರ ರಾತ್ರಿ ಮುಂಡರಗಿ ತೋಂಟದಾರ್ಯ ಮಠದಲ್ಲಿ ಜರುಗಿದ 65ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮ, ನೂತನ ಶಾಸಕ ಹಾಗೂ ಪುರಸಭೆ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ಹಿಂದೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮ ಹತ್ತಿರ ಬಂದಿದ್ದ ಪೋಸ್ಕೋ ಕಂಪನಿಯನ್ನು ಎಲ್ಲರ ಸಹಕಾರದ ಹೋರಾಟದ ಮೂಲಕ ಇಲ್ಲಿಂದ ಹೊಡೆದೋಡಿಸಿದ್ದು, ಒಂದು ವೇಳೆ ಅಂದು ನಾವೆಲ್ಲರೂ ಸುಮ್ಮನಿದ್ದಿದ್ದರೆ ಇಂದು ಈ ಪ್ರದೇಶದಲ್ಲಿರುವ ಸುಮಾರು 3.5 ಸಾವಿರ ಎಕರೆ ರೈತರ ಜಮೀನುಗಳು ಹೋಗುತ್ತಿದ್ದವು. ವಿಜ್ಞಾನ ಸಾಕಷ್ಟು ಮುಂದುವರಿದಿದೆ. ನಾವು ಏನೆಲ್ಲ ಕಂಡು ಹಿಡಿಯುತ್ತೇವೆ. ಆದರೆ, ನಮ್ಮಿಂದ ಒಂದೇ ಒಂದು ಹಿಡಿ ಮಣ್ಣು ತಯಾರು ಮಾಡಲು ಆಗುವುದಿಲ್ಲ. ಆದ್ದರಿಂದ ಹಣದ ಆಸೆಗೆ ಬಲಿಯಾಗುವ ಮೂಲಕ ರೈತರು ತಮ್ಮ ಜಮೀನುಗಳನ್ನು ನೀಡಬಾರದು. ಶಾಸಕರಾದವರು ಕಮಿಶನ್ ಹೆಸರಿನಲ್ಲಿ ತಮಗೆ ದೊರೆಯುವ ಲಂಚದ ಹಣಕ್ಕಾಗಿ ಏನೂ ಅರಿಯದ ಮುಗ್ದ ರೈತರಿಗೆ, ಜನರಿಗೆ ಮೋಸ ಮಾಡಬಾರದು. ಶಾಸಕರಾದವರು ಅಭಿವೃದ್ಧಿಯ ಕುರಿತು ಪ್ರಜೆಗಳಿಗೆ ಭಾಷೆ ಕೊಡಬಾರದು. ಒಂದು ವೇಳೆ ಕೊಟ್ಟರೆ ಅದನ್ನು ಖಂಡಿತವಾಗಿಯೂ ನೆರವೇರಿಸಿ ಅವರ ಪ್ರೀತಿಗೆ ಪಾತ್ರರಾಗಬೇಕು. ಈ ಹಿಂದೆ 65 ವರ್ಷಗಳ ಕಾಲ ಅಧಿಕಾರ ನಡೆಸಿದ ಕೆಲವು ಸರ್ಕಾರಗಳು ಬರೀ ಭಾಷೆ, ಭರವಸೆ ನೀಡುವುದರಲ್ಲಿಯೇ ಅಧಿಕಾರ ಮುಗಿಸಿವೆ. ಆದರೆ, ಯಾರೂ ಅದಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ಒಬ್ಬ ಶಾಸಕನಿಂದ ಒಳ್ಳೆಯವರಿಗೆ ಯಾವಾಗಲೂ ಕೆಟ್ಟದ್ದಾಗಬಾರದು. ಅದೇ ರೀತಿ ದುಷ್ಟರಿಗೆ ಸಹಾಯ-ಸಹಕಾರ ನೀಡಬಾರದು. ಭ್ರಷ್ಟರಾಗಬಾರದು. ಈ ಭಾಗದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಬಡವರ, ದೀನ ದಲಿತರ ಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. 5 ವರ್ಷದ ಅಧಿಕಾರಾವಧಿಯಲ್ಲಿ ಶಾಸಕ ದೊಡ್ಡಮನಿ ಹಾಗೂ ಪುರಸಭೆಯ ನೂತನ 23 ಸದ್ಯಸರು ಜನಮೆಚ್ಚುವಂತಹ ಕೆಲಸ ಮಾಡಬೇಕು ಎಂದರು. ಧಾರವಾಡದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಮಾತನಾಡಿದರು. ಡಾ. ಎಚ್.ಪಿ. ಪೂಜಾರ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಕುರಿತು ಮಾತನಾಡಿದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಫಕ್ರುಸಾಬ್ ಹಾರೋಗೇರಿ, ಲಿಂಗರಾಜಗೌಡ ಪಾಟೀಲ, ಪ್ರೇಮವ್ವ ಗಣದಿನ್ನಿ, ಕೊಟ್ರಮ್ಮ ಇಟಗಿ, ಭಾರತಿ ಹಕ್ಕಿ, ಬಸವರಾಜ ರಾಮೇನಹಳ್ಳಿ, ರಾಘವೇಂದ್ರ ಕುರಿಯವರ, ಪ್ರಭು ಅಬ್ಬಿಗೇರಿ, ರೀಹಾನಾಬೇಗಂ ಕೆಲೂರ, ಹೇಮಾವತಿ ಅಬ್ಬಿಗೇರಿ ಸೇರಿದಂತೆ 23 ಜನ ಪುರಸಭೆ ಸದಸ್ಯರನ್ನು, ಭಕ್ತಿ ಸೇವೆ ವಹಿಸಿದ್ದ ಉಮೇಶ ಹಿರೇಮಠ ಅವರನ್ನು ಶ್ರೀಗಳು ಸನ್ಮಾನಿಸಿದರು.
ಹನುಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ಹೇಮಂತಗೌಡ ಪಾಟೀಲ, ನೀಲಕಂಠಪ್ಪ ಪತ್ತಾರ, ಡಾ. ನಿಂಗು ಸೊಲಗಿ, ಸಂಗಣ್ಣ ಲಿಂಬಿಕಾಯಿ, ಧೃವಕುಮಾರ ಹೊಸಮನಿ, ಪಾಲಾಕ್ಷಿ ಗಣದಿನ್ನಿ, ನಾಗೇಶ ಹುಬ್ಬಳ್ಳಿ, ಡಾ. ಬಿ.ಎಎಸ್. ಮೇಟಿ ಪಾಲ್ಗೊಂಡಿದ್ದರು. ಕರ್ನಾಟಕ ಜನಪದ ಕಲಾತಂಡದ ಶರಣಪ್ಪ ಕುಬಸದ, ಎ.ಪಿ. ದಂಡೀನ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕೀರ್ತಿ ಪಾಟೀಲ ಧರ್ಮಗ್ರಂಥ ಪಠಣ ಮಾಡಿ, ಶಶಿಕಲಾ ಕಂಬಾರ ವಚನಚಿಂತನ ನೆರವೇರಿಸಿದರು. ಈಶ್ವರಪ್ಪ ಬೆಟಗೇರಿ ಸ್ವಾಗತಿಸಿ, ಕೆ.ಎ. ಹಿರೇಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

