ಶಂಕರಾಚಾರ್ಯರ ಸಾಧನೆಗೆ ಕೃತಜ್ಞರಾಗಿರಿ
ಗದಗ: ಶಂಕರಾಚಾರ್ಯರು ಅವತಾರ ತಾಳದಿದ್ದರೆ ಹಿಂದೂ ಧರ್ಮವು 8ನೇ ಶತಮಾನದಲ್ಲಿಯೇ ಬೌದ್ಧ ಧರ್ಮದಿಂದ ನಲುಗಿ ಹೋಗುವ ಅಪಾಯವಿರುತ್ತಿತ್ತು. ಆದ್ದರಿಂದ ಸಮಸ್ತ ಹಿಂದೂ ಸಮಾಜವು ಶಂಕರಾಚಾರ್ಯರ ಸಾಧನೆಗೆ ಸದಾ ಕೃತಜ್ಞರಾಗಿರಬೇಕು ಎಂದು ಕೀರ್ತನ ಕೇಸರಿ ದಿಗಂಬರ ಶಾಸ್ತ್ರಿ ಕುರ್ತಕೋಟಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಐತಿಹಾಸಿಕ ಪ್ರಸಿದ್ಧಿ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಂಕರರ ಜಯಂತಿ ಉತ್ಸವ ದಿನದಂದು ಶಂಕರಾಚಾರ್ಯರ ಜನನೋತ್ಸವ ಕೀರ್ತನ ಸೇವೆಗೈದರು. ಹಿಂದೂ ಧರ್ಮದ ಪುನರುತ್ಥಾನಗೈದ ಜ. ಶಂಕರಾಚಾರ್ಯರು ಸಾಕ್ಷಾತ್ ಪರಶಿವನ ಅವತಾರವೇ ಆಗಿದ್ದಾರೆ. ಶಂಕರರು ಕೇರಳದ ಕಾಲಟಿಯಲ್ಲಿ ಆರ್ಯಂಬ ಹಾಗೂ ಶಿವ ಗುರುಗಳ ಪುತ್ರರಾಗಿ ಜನಿಸಿ ಕೇವಲ 32 ವಯಸ್ಸಿನಲ್ಲಿಯೇ ಇಡೀ ಭಾರತವನ್ನು ಸಂಚರಿಸಿ ಭಾರತದ 4 ದಿಕ್ಕುಗಳಲ್ಲಿ ಚತುರಾಮ್ನಾಯ ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಪುನರುಜ್ಜೀವನಗೈದದ್ದು ಅತ್ಯದ್ಭುತ ಸಾಧನೆಯಾಗಿದೆ ಎಂದರು. ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ, 8 ಗಂಟೆಗೆ ರತ್ನಾಕರಭಟ್ ಜೋಶಿ ಅವರಿಂದ ಶಂಕರ ಭಾಷ್ಯ ಪ್ರವಚನ ಹಾಗೂ ಶಂಕರ ದಿಗ್ವಿಜಯ ಪುರಾಣ ನೆರವೇರಿದವು. 9 ಗಂಟೆಗೆ ಸರಸ್ವತಿ ಮಹಿಳಾ ಮಂಡಳದವರಿಂದ ಸೌಂದರ್ಯ ಲಹರಿ ಪಠಣ ಹಾಗೂ ಸಂಜೆ 5 ಗಂಟೆಯಿಂದ ಗದಗ ನಗರದ ವಿವಿಧ ಮಹಿಳಾ ಮಂಡಳಗಳಿಂದ ಸೌಂದರ್ಯ ಲಹರಿ ಪಠಣ ಕಾರ್ಯಕ್ರಮ ಜರುಗಿದವು. ನಂತರ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿ ಅವರಿಂದ ಗಮಕವಾಚನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಶಂಕರ ಜಯಂತ್ಯುತ್ಸವ ಕಮಿಟಿಯ ಧರ್ಮದರ್ಶಿ ಪ್ರೊ. ಆನಂದ ಗೋಡಂಖಿಂಡಿ, ಪ್ರೊ. ಬಿ.ವಿ. ಇನಾಮದಾರ, ರಾಮಚಂದ್ರ ಪೂಜಾರ, ರಮೇಶ ಪೂಜಾರ, ಶಂಕರಾಚಾರ್ಯ ಯುವಕ ಮಂಡಳದ ಅಧ್ಯಕ್ಷ ರಾಮಚಂದ್ರ ಮೋನೆ, ಪ್ರೊ. ಅನಿಲ ವೈದ್ಯ, ಗಣೇಶಭಟ್ಟ ಪುರಾಣಿಕ, ಗಜಾನನ ಕೌಜಲಗಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

