ಗದಗ

ಮದುವೆ ಸುಗ್ಗಿ ಜೋರು: ಬಸ್‌ಗೆ ಬರ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 23
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತಲೂ ಈ ಬಾರಿಯ ಮದುವೆಯ ಸೀಜನ್ ಜೋರಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮದುವೆಗಳ ಸಂಖ್ಯೆ ದುಪ್ಪಟ್ಟಾಗಿದೆ.
ಈ ಮದುವೆಗಳಿಗಾಗಿ ಸಾರ್ವಜನಿಕರು ಜವಳಿ, ಮಾರುಕಟ್ಟೆ ಇನ್ನಿತರೆ ಕಾರ್ಯಗಳಿಗಾಗಿ ಗದಗ ನಗರಕ್ಕೆ ಆಗಮಿಸುತ್ತಿದ್ದು, ಇವರಿಗೆ ಸರಿಯಾದ ಬಸ್‌ನ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮದುವೆ ಕಾರ್ಯ ಮಾಡುವುದು ಸುಲಭದ ಮಾತಲ್ಲ. ಮನೆಯಲ್ಲಿನ ಪ್ರತಿಯೊಬ್ಬ ಸದಸ್ಯರೂ ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನರಾಗಿತ್ತಾರೆ. ಮದುವೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಬೇರೆ ಬೇರೆ ಊರುಗಳಿಗೆ ತೆರಳಲು ಜನರು ಹೆಚ್ಚಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಈ ಮದುವೆ ಸೀಜನ್‌ನಲ್ಲಿ ಸರಿಯಾದ ಬಸ್‌ನ ಸೌಕರ್ಯವಿಲ್ಲದೆ ದಿನವಿಡೀ ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರ ತೊಂದರೆ ಕೇಳುವವರ್ಯಾರು ? ಬೇರೆ ಬೇರೆ ಹಳ್ಳಿಗಳಿಂದ ನಗರಕ್ಕೆ ಬರುವ ಪ್ರಯಾಣಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ. ಒಂದು ಮದುವೆಯ ಜವಳಿ ಖರೀದಿಸಲು ಒಬ್ಬರೊ ಇಬ್ಬರೋ ಬರುವುದಿಲ್ಲ. ತಮ್ಮ ಬಂಧು ಬಳಗದ ಹಲವಾರು ಜನರು ಸೇರಿಕೊಂಡು ಬರುತ್ತಾರೆ. ಆದರೆ, ಕೆಲವು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಮರ್ಪಕ ಬಸ್‌ನ ಸೌಕರ್ಯ ಮರೀಚಿಕೆಯಾಗಿಯೇ ಉಳಿದಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಬರುವ ಬಸ್ಸನ್ನೇ ಕಾಯುವ ಪರಿಸ್ಥಿತಿ ಉಂಟಾಗಿದೆ. ವಾಹನಗಳ ಸಮಸ್ಯೆಯಿಂದ ಬಸ್‌ಗಳು ನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಇಂತಹ ಬಸ್‌ನಲ್ಲಿಯೇ ಪ್ರಯಾಣಿಕರು ನಿಟ್ಟುಸಿರು ಬಿಡುತ್ತಾ ಸಂಚರಿಸುತ್ತಿದ್ದಾರೆ.
ಖಾಸಗಿ ವಾಹನಗಳಿಗೂ ಬೇಡಿಕೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಈಗ ಜನಜಂಗುಳಿಯಿಂದ ತುಂಬಿಕೊಂಡು ಹೋಗುತ್ತಿರುವುದರಿಂದ ಖಾಸಗಿ ಬಸ್, ಟೆಂಪೊ, ಟಾಟಾ ಏಸ್, ಟ್ರ್ಯಾಕ್ಸ್‌ಗಳಿಗೀಗ ಎಲ್ಲಿಲ್ಲದ ಬೇಡಿಕೆಯುಂಟಾಗಿದೆ. ಕೆಲವು ಖಾಸಗಿ ವಾಹನಗಳ ಮಾಲೀಕರು ಬಸ್‌ಗಳು ಕಡಿಮೆ ಸಂಚರಿಸುವ ಗ್ರಾಮಗಳಿಗೆ ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ. ಇದರ ಲಾಭ ಪಡೆದ ಅವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಒಂದು ಕಡೆ ಸಾರಿಗೆ ಬಸ್‌ಗಳಲ್ಲಿ ಗದ್ದಲ, ಒತ್ತಡದ ಪ್ರಯಾಣ ಮಾಡುವ ಕಷ್ಟವನ್ನು ತಾಳದೇ ಹಲವರು ಈ ಖಾಸಗಿ ವಾಹನಗಳ ಮಾಲೀಕರಿಗೆ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ.
ಬಸ್‌ನಿಲ್ದಾಣದಲ್ಲಿ ನಿತ್ಯ ಜಗಳೆ: ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮದುವೆಯ ಅಬ್ಬರ ಜೋರಾಗಿದೆ. ಬೆಳಗ್ಗೆ ಗ್ರಾಮಗಳಿಂದ ಬರುವ ಬಸ್‌ಗಳು ಹಾಗೂ ನಗರ ಪ್ರದೇಶದಿಂದ ಸಂಜೆ ತೆರಳುವ ಬಸ್‌ಗಳಲ್ಲಿ ಪ್ರಯಾಣಿಕರು ಬಸ್‌ನ ಚಾಲಕ ಹಾಗೂ ನಿರ್ವಾಹಕರ ಜತೆ ಪ್ರತಿದಿನ ಜಗಳವಾಡುವ ದೃಶ್ಯ ನಗರದ ಬಸ್ ನಿಲ್ದಾಣದಲ್ಲಿ ಸಾಮಾನ್ಯವಾಗಿದೆ. ಸಂಜೆಯಾಗುತ್ತಿದ್ದಂತೆಯೇ ಬಸ್‌ನಿಲ್ದಾಣವು ಜನಜಂಗುಳಿಯಿಂದ ಕೂಡಿರುತ್ತದೆ. ಗ್ರಾಮಕ್ಕೆ ತೆರಳುವ ಬಸ್ ಬರುತ್ತಿದ್ದಂತೆಯೇ ಜನ ಬಸ್‌ಗೆ ಮುಗಿಬೀಳುತ್ತಾರೆ.
-ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.