ಸಮ್ಮೇಳನ ಯಶಸ್ಸಿಗೆ ಕೈಜೋಡಿಸಿ: ಪಾಟೀಲ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 24
ಜೂ. 15, 16ರಂದು ಮುಂಡರಗಿಯಲ್ಲಿ ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಉತ್ತಮ ಸಂಘಟನೆಗೆ ಗಮನ ನೀಡಬೇಕು ಹಾಗೂ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಶುಕ್ರವಾರ ಮುಂಡರಗಿ ಪಟ್ಟಣದ ಪುರಸಭೆ ಮಳಿಗೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಾಸರ ಹಾಗೂ ಶರಣರ ಪಾತ್ರ ಪ್ರಮುಖವಾಗಿದೆ. ಮುಂಡರಗಿ ಸಾಹಿತಿಗಳ ತವರೂರು. ಜಗದ್ಗುರು ಅನ್ನದಾನೀಶ್ವರ ಶ್ರೀ ಸೇರಿದಂತೆ ಅನೇಕ ಹಿರಿ-ಕಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು ಇಲ್ಲಿದ್ದಾರೆ. ಈ ಹಿಂದೆ ಮುಂಡರಗಿ ಪಟ್ಟಣದಲ್ಲಿ ಮೊದಲ ಜಿಲ್ಲಾ ಸಮ್ಮೇಳನವನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಮಾಡಲಾಗಿತ್ತು. ಅಂದು ಎಲ್ಲ ಸ್ಥಳೀಯ ವ್ಯಾಪಾರಸ್ಥರು, ವರ್ತರು, ನೌಕರರು, ಗಣ್ಯರು ತನು, ಮನ, ಧನ ಸಹಾಯ ಮಾಡಿದ್ದರು. ಈ ಬಾರಿಯೂ ಸಹ ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ಕಸಾಪ ಸದಸ್ಯ ವೈ.ಎನ್. ಗೌಡರ ಮಾತನಾಡಿ, ಈ ಹಿಂದೆ ಮುಂಡರಗಿ ಉತ್ಸವವನ್ನು ಯಶಸ್ವಿ ಮಾಡಿದಂತೆ ಪಕ್ಷಭೇದ ಹಾಗೂ ಜಾತಿಭೇದ ಮರೆತು ಎಲ್ಲರೂ ಒಂದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ. ಸಮ್ಮೇಳನಕ್ಕೆ ಬೇಕಾಗುವ ಹಣದ ಕ್ರೋಡೀಕರಣದ ಜತೆಗೆ ಸ್ಥಳೀಯವಾಗಿ ದೊರೆಯುವ ಮಾನವ ಸಂಪನ್ಮೂಲದ ಕ್ರೋಡೀಕರಣದ ಅವಶ್ಯವಿದೆ. ಈ ಹಿಂದೆ ಮೊದಲನೇ ಜಿಲ್ಲಾ ಸಮ್ಮೇಳನ ಮಾಡುವಾಗ ಸ್ಥಳೀಯರಾದ ಎಸ್.ಎಸ್.ಪಾಟೀಲರು ಶಾಸಕರಾಗಿದ್ದರು. ಇಂದು ಮತ್ತೆ ಮುಂಡರಗಿಯವರು ಹಾಗೂ ಸಾಹಿತ್ಯಾಸಕ್ತರಾದ ರಾಮಕೃಷ್ಣ ದೊಡ್ಡಮನಿಯವರು ಶಾಸಕರಾಗಿದ್ದು, ಅಂದಿನಂತೆಯೇ ಈಗಲೂ ಸಮ್ಮೇಳನ ನಡೆಯುತ್ತದೆ. ಸಮ್ಮೇಳನದಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಜೊತೆಗೆ ಸ್ಥಳೀಯ ಸಾಹಿತಿಗಳಿಗೆ ಆದ್ಯತೆ ನೀಡಬೇಕು ಎಂದರು.
ನಾಡೋಜ, ಜ.ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಕಾರ್ಯಾಲಯ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವಿ.ಎಲ್.ನಾಡಗೌಡ್ರ, ಚಲನಚಿತ್ರ ನಿರ್ದೇಶಕ ನಾಗೇಂದ್ರ ಮಾಗಡಿ, ಪ್ರೊ. ಎ.ವೈ. ನವಲಗುಂದ, ದಿಲೀಪಕುಮಾರ ಜೋಶಿ, ನಾರಾಯಣಪ್ಪ ಇಲ್ಲೂರ, ಎ.ಬಿ. ಹಿರೇಮಠ, ಪಾಲಾಕ್ಷಿ ಗಣದಿನ್ನಿ, ಬಸವರಾಜ ದೇಸಾಯಿ, ರಾಘವೇಂದ್ರ ಕುರಿ, ವೀರೇಶ ಸಜ್ಜನರ, ಬಸವರಾಜ ರಾಮೇನಹಳ್ಳಿ, ಪ್ರೊ. ಸಿ.ಎಸ್.ಅರಸನಾಳ, ಎಂ.ಜಿ. ವಡ್ಡಟ್ಟಿ, ಶ್ರೀದೇವಿ ಜೋಶಿ ಅನೇಕರು ಉಪಸ್ಥಿತರಿದ್ದರು. ಭಾಗ್ಯಲಕ್ಷ್ಮಿ ಇನಾಮತಿ ನಿರೂಪಿಸಿ, ಪ್ರೊ. ಎಸ್.ಆರ್. ಬಸಾಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

