ಗದಗ

ರೀ... ಕುಡಿಯಾಕ್ ನೀರು ಕೊಡ್ರಿ

Published On :

ಗದಗ: ಜಿಲ್ಲೆಗೂ ಬರಗಾಲಕ್ಕೂ ಅವಿನಾಭಾವ ನಂಟಿದೆ. ಎರಡು ವರ್ಷಗಳಿಂದ ಸತತ ಬರಗಾಲದಿಂದ ಜಿಲ್ಲೆಯಲ್ಲಿ ಕುಡಿವ ನೀರಿಗೆ ತೀವ್ರ ತತ್ವಾರ ಉಂಟಾಗಿದ್ದು. ಇನ್ನು ಪರ್ಯಾಯ ನೀರಿಗಾಗಿ ಜನರು ನಂಬಿರುವುದು ಕೊಳವೆ ಬಾವಿಗಳನ್ನು. ಆದರೆ, ಇಂದು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವೇ ಇರುವುದಿಲ್ಲ, ಹಾಗಾಗಿ ಜಿಲ್ಲೆಯ ಜನತೆ ಹನಿ ನೀರು ಕುಡಿಯ ಬೇಕಾದಲ್ಲಿ ಹೆಸ್ಕಾಂ ಅಪ್ಪಣೆ ಬೇಕೆ ಬೇಕು.
ಕುಡಿವ ನೀರಿನ ಬೇಡಿಕೆ: ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, 131 ಎಂಎಲ್‌ಡಿ ನೀರು ಬೇಕು. ಗದಗ- ಬೆಟಗೇರಿ ಅವಳಿ ನಗರ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳು ಹಾಗೂ 9 ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳು ಕುಡಿವ ನೀರಿಗಾಗಿ ನಂಬಿಕೊಂಡಿರುವುದು ತುಂಗಭದ್ರಾ ನದಿಯನ್ನು, ಇನ್ನು ರೋಣ ಮತ್ತು ನರಗುಂದ ಪಟ್ಟಣಗಳು ಹಾಗೂ 12 ಗ್ರಾಪಂಗಳು ನಂಬಿಕೊಂಡಿರುವುದು ಮಲಪ್ರಭಾ ನದಿಯನ್ನು, ಇನ್ನು ಮುಳಗುಂದ, ನರೇಗಲ್ಲ ಹಾಗೂ ಗಜೇಂದ್ರಗಡ ಪುರಸಭೆ ಮತ್ತು ಸಮೀಪದ ಹಳ್ಳಿಗಳು ಕುಡಿವ ನೀರಿಗಾಗಿ ಕೊಳವೆಬಾವಿಗಳನ್ನು ಆಶ್ರಯಿಸಿರುವುದರಿಂದ, ಪ್ರತಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಲಭ್ಯವಾಗುತ್ತಿರುವ ನೀರು ಕೇವಲ 51 ಎಂಎಲ್‌ಡಿ ಮಾತ್ರ.
ಕೊಳವೆಬಾವಿಯೇ ಆಧಾರ: ಜಿಲ್ಲೆಯಲ್ಲಿ 106 ಗ್ರಾಪಂಗಳಿದ್ದು, ಅವುಗಳಲ್ಲಿ 85 ಗ್ರಾಪಂಗಳ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳು ಕುಡಿವ ನೀರಿಗೆ ಆಧರಿಸಿರುವುದು ಕೊಳವೆಬಾವಿಗಳನ್ನು. ಗ್ರಾಪಂ ಸಿಬ್ಬಂದಿ ಗ್ರಾಮಗಳಿಗೆ ಬೇಕಾಗುವಷ್ಟು ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿಯೆಲ್ಲಾ ವಿದ್ಯುತ್‌ಗಾಗಿ ಕಾಯ್ದು ಕುಳಿತು ಕೊಳವೆಬಾವಿಗಳ ಮೂಲಕ ನೀರು ಸಂಗ್ರಹಿಸಿದರೂ, ಗ್ರಾಮಗಳಲ್ಲಿನ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಫ್ಲೋರೈಡ್ ಸಮಸ್ಯೆ ಇದೆ:  ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದು ಹೋಗಿದ್ದು, ಪ್ರತಿ ಕೊಳವೆ ಬಾವಿಗಳಲ್ಲಿಯೂ 400 ಅಡಿಗಿಂತಲೂ ಆಳವಾದ ಸ್ಥಳದಿಂದ ನೀರು ತೆಗೆಯುತ್ತಿರುವುದರಿಂದ ಅತಿಯಾದ ಲವಣಾಂಶಗಳು ಹಾಗೂ ಫ್ಲೋರೈಡ್ ಅಂಶಗಳು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 2810 ಕೊಳವೆಬಾವಿಗಳಿದ್ದು, ಅವುಗಳಲ್ಲಿನ ಶೇ 25ರಷ್ಟು ಕೊಳವೆಬಾವಿಗಳಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶಗಳು ಪತ್ತೆಯಾಗಿವೆ. ಅದರಲ್ಲಿಯೂ ಮುಂಡರಗಿ ತಾಲೂಕಿನ 18 ಗ್ರಾಮಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ.
ದೂರದಿಂದ ಕುಡಿವ ನೀರು ತರುತ್ತಾರೆ: ಜಿಲ್ಲೆಯ ಶಿರಹಟ್ಟಿ ತಾಲೂಕು ಹಾಗೂ ಗದಗ ತಾಲೂಕಿನ 9 ಗ್ರಾಮಗಳ ಜನತೆ ಕುಡಿವ ನೀರಿಗಾಗಿ ಅರ್ಧ ಕಿ.ಮೀ ಕ್ರಮಿಸಿಯೇ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನದಿ ಹಾಗೂ ಹಳ್ಳಗಳ ಪಕ್ಕದಲ್ಲಿರುವ ಜನತೆ ಅತಿಯಾದ ಮರಳು ಗಣಿಗಾರಿಕೆಯಿಂದ ತೊಂದರೆ ಅನುಭವಿಸುತ್ತಿದ್ದು, ನದಿ ಹಾಗೂ ಹಳ್ಳಗಳಲ್ಲಿ ಈ ಹಿಂದೆ ಸಣ್ಣ ಗುಂಡಿಗಳನ್ನು ತೋಡಿದರೆ ಸಾಕು ನೀರು ಲಭ್ಯವಾಗುತ್ತಿತ್ತು. ಆದರೆ ಅದೆಲ್ಲಾ ಇಂದು ಕನಸಿನ ಮಾತು ಎನ್ನುವಂತಹ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಸಲಹೆ:  ಜಿಲ್ಲೆಯ ಬಹುತೇಕ ದೊಡ್ಡ ಪಟ್ಟಣಗಳು ನದಿಯನ್ನೇ ನೀರಿನ ಮೂಲವನ್ನಾಗಿ ಆಶ್ರಯಿಸಿರುವ ಹಿನ್ನೆಲೆಯಲ್ಲಿ ಈ ಪಟ್ಟಣಗಳ ಸಮೀಪದಲ್ಲಿಯೇ ಅತ್ಯಂತ ದೊಡ್ಡ, ದೊಡ್ಡ ಕೆರೆಗಳನ್ನು ನಿರ್ಮಿಸಿ, ಮಳೆಗಾಲದಲ್ಲಿ ನದಿಯಲ್ಲಿ ಲಭ್ಯವಿರುವ ಹೇರಳವಾದ ನೀರನ್ನು ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತ ಚಿಂತನೆ ನಡೆಸಬೇಕಿದೆ. ಇದರಿಂದ ಪ್ರತಿ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯೂ ದೂರವಾಗುತ್ತದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ಇದು ಒಂದೇ ಕಾಮಗಾರಿ ಅನುಷ್ಠಾನದಿಂದ ಎರಡೆರಡು ಲಾಭಗಳನ್ನು ಪಡೆಯಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.