ಬಣಜಿಗರ ಸಂಘಟನೆ ಅವಶ್ಯ: ಕೊಪ್ಪಳ
ಗಜೇಂದ್ರಗಡ: ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳಾಗಿ, ವ್ಯವಹಾರದಲ್ಲಿ ಜಾಣರೆನಿಕೊಂಡ ಬಣಜಿಗರ ವೈಭವಯುತ ಇತಿಹಾಸ ಮತ್ತೆ ಮರುಕಳಿಸಲು ಸಂಘಟನೆ ಈಗ ಅತಿ ಆವಶ್ಯವಾಗಿದೆ ಎಂದು ರಾಜ್ಯ ಬಣಜಿಗ ಸಂಘ ಮಹಾಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಸ್ಥಳೀಯ ಮೈಸೂರು ಮಠದಲ್ಲಿ (ಚೌಕಿಮಠ) ನೂತನವಾಗಿ ಅಸ್ತಿತ್ವಕ್ಕೆ ತರಲಾದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರ ಇತಿಹಾಸ ಪುಟದಲ್ಲಿ ಗುರುತರ ಕೊಡುಗೆ ನೀಡಿರುವ ಬಣಜಿಗ ಸಮಾಜ ಬೆನ್ನಿಗೆ ಭವ್ಯವಾದ ಇತಿಹಾಸವಿದ್ದರೆ, ಮುಂದೆ ಗಾಢವಾದ ಅಂಧಕಾರ ಎದುರಾಗಿದೆ. ಕಾರಣ ಯುವಕರು ದಾರಿ ತಪ್ಪುತ್ತಿದ್ದಾರೆ. ಸಮಾಜದಲ್ಲಿ ಸಮನ್ವಯದ ಕೊರತೆ ಎದುರಾಗಿದೆ. ಇದನ್ನರಿತು ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಸಾಮೂಹಿಕ ಒಗ್ಗಟ್ಟು ಅಗತ್ಯವಾಗಿದೆ. ಬಣಜಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ವ್ಯಾಪಾರ, ಉದ್ದಿಮೆ ಮೂಲ ವೃತ್ತಿಯನ್ನಾಗಿಸಿಕೊಂಡ ಬಣಜಿಗರು ಎಂದೆಂದಿಗೂ ಕೊಡುಗೆ ದಾನಿಗಳು, ರಾಜ್ಯದಲ್ಲಿ ಅನೇಕ ವಿದ್ಯಾ ಸಂಸ್ಥೆಗಳು, ಆರ್ಥಿಕ ಸಂಸ್ಥೆಗಳು, ಮಠ ಮಾನ್ಯಗಳನ್ನು ಕಟ್ಟಿ ಉಳಿಸಿ ಬೆಳೆಸುವ ಜತೆಗೆ ಧನ, ಧಾನ್ಯ, ಆಸ್ತಿಗಳನ್ನು ಧಾರೆ ಎರೆದು ಕೊಡಲಾಗಿದೆ. ಇಂತಹ ಬಣಜಿಗ ಸಮಾಜ ಬಾಂಧವರ ವ್ಯಾಪಾರ ಈಗ ಕುಂಠಿತವಾಗಿದೆ. ಶಿಕ್ಷಣ ಕೊರತೆ, ಆರ್ಥಿಕ ತೊಂದರೆ ಎದ್ದು ಕಾಣುತ್ತಿದೆ. ಪರಸ್ಪರ ತಿಳಿವಳಿಕೆ, ಸಹಕಾರ, ವಿಶ್ವಾಸ ಹಾಗೂ ಸೌಹಾರ್ದತೆ ಕೊರತೆ ಕಾಣುತ್ತಿದೆ. ಇದರಿಂದ ಮುಕ್ತಿ ಪಡೆಯಲು ಧರ್ಮಾಚರಣೆ ಜತೆಗೆ ಸಂಘಟನೆ ಶಕ್ತಿ ಒಂದೇ ರಹದಾರಿಯಾಗಿದೆ ಎಂದರು.
ಲಿಂಗಾಯತ ಧರ್ಮದ ಪರಿಪೂರ್ಣ ಬೆಳವಣಿಗಾಗಿ ಬಣಜಿಗ ಸಮಾಜ ಸಂಘಟನೆ ಅತಿ ಅವಶ್ಯವಾಗಿದೆ. ನಮಗಾಗಿ ಅಲ್ಲದಿದ್ದರೂ ಮಕ್ಕಳ ಭವಿಷ್ಯ ಹಿತದೃಷ್ಟಿಯಿಂದ ಜತೆಗೆ ಹತ್ತಾರು ಸಮಸ್ಯೆಗಳ ನಿವಾರಣೆಗೆ ಹಿಂದಿನ ವೈಭವವನ್ನು ಮತ್ತೆ ಪಡೆಯುವದಕ್ಕಾಗಿ ಹರಿದು ಹಂಚಿ ಹೋಗಿರುವ ಸಮಾಜವನ್ನು ಕಟ್ಟಬೇಕಾಗಿದೆ. ಈ ದಿಶೆಯಲ್ಲಿ ವೈಮನಸ್ಸು ಬದಿಗಿಟ್ಟು ಸಮಾನ ಮನಸ್ಕರಾಗಿರಿ. ಮತ್ಸರ ಭಾವನೆ ತ್ಯಜಿಸಿ ಕೂಡಿ ಬಾಳುವ ಸಂಸ್ಕೃತಿ ಅಳವಡಿಸಿಕೊಳ್ಳಿರಿ ಎಂದರು.
ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಮಾಜ ಜಿಲ್ಲಾಧ್ಯಕ್ಷ ಅಂದಾನಪ್ಪ ಪಟ್ಟಣಶೆಟ್ಟಿ ಮಾತನಾಡಿ, 1995ರಲ್ಲಿ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಸಮಾಜ ಪ್ರತಿವರ್ಷ ವೈದ್ಯಕೀಯ ಉಚಿತ ಚಿಕಿತ್ಸೆ, ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಲಾಗಿದೆ. ಹೊಸದಾಗಿ ಸಂಘಟನೆ ಹುಟ್ಟುಹಾಕಿರುವ ತಾವೂ ಇದೇ ರೀತಿಯಲ್ಲಿ ಸಾಗಿರಿ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ವಿ. ಕಂಬಳ್ಯಾಳ, ರೋಣ ತಾಲೂಕು ಬಣಜಿಗರ ಸಂಘ ಉಪಾಧ್ಯಕ್ಷ ಈರಣ್ಣ ಶೆಟ್ಟರ ಮಾತನಾಡಿದರು. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ವೀರಣ್ಣ ಮತ್ತಿಕಟ್ಟಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕು ಘಟಕ ಅಧ್ಯಕ್ಷ ರಾಜಣ್ಣ ಹೂಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ಸಂಘ ಖಜಾಂಚಿ ಬಸವರಾಜ ಗಣವಾರಿ, ರೋಣ ಉದ್ಯಮಿ ಮುತ್ತಣ್ಣ ಸಂಗಳದ, ಹುನಗುಂದ ತಾಲೂಕು ಅಧ್ಯಕ್ಷ ಮಹಾಂತಪ್ಪ ಶೆಟ್ಟರ್, ಕೊಪ್ಪಳದ ಬಸವರಾಜ ಬಳ್ಳೊಳ್ಳಿ, ಮಹೇಶ ಮೆಟ್ಲಕೊಡ, ಸಿಂದನೂರ ಶಿದ್ರಾಮಪ್ಪ ಕಡಕೊಳ, ಶಿವರುದ್ರಪ್ಪ ಸಂಕನೂರ, ಗವಿಯಪ್ಪ ಇಂಡಿ, ಕೂಡ್ಲೆಪ್ಪ ಬಳಿಗೇರ, ಶರಣಬಸಪ್ಪ ಜಾಲಿಹಾಳ, ಸಿದ್ದಲಿಂಗಪ್ಪ ಲಿಂಗಶೆಟ್ಟರ್, ಚಂದ್ರಶೇಖರ ಚೋಳಿನ, ಎಂ.ವಿ. ಯಾಳಗಿ, ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಳಕಪ್ಪ ಕತ್ತಿಶೆಟ್ಟರ್ ಇದ್ದರು. ಸಾಹಿತಿ ಜಗದೀಶ ದುದ್ಗಿ ಸ್ವಾಗತಿಸಿದರು. ಮಹಾಂತೇಶ ಮಳಗಿ ನಿರೂಪಿಸಿದರು. ಸಂಗಮೇಶ ಚೆಟ್ಟೇರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

