ಗಜೇಂದ್ರಗಡದಲ್ಲೂ ಗಡಬಡ
-ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 27
ನೀರಿನ ಬವಣೆ ಕಂಡರಿಯದ ಪಟ್ಟಣದ ಜನತೆಗೆ ಈ ಬಾರಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಬಸವಳಿದು ಜೀವ ಜಲಕ್ಕಾಗಿ ನಿತ್ಯ ಪರದಾಡುವ ಸ್ಥಿತಿ ಎದುರಾಗಿದೆ.
ಬರದ ಛಾಯೆಯಿಂದಾಗಿ ಅಂತರ್ಜಲ ಕುಸಿದ ಪರಿಣಾಮ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಈ ಹಿಂದೆ ಪುರಸಭೆ ಪಟ್ಟಣದಲ್ಲಿ ನಿತ್ಯ ನೀರು ಸರಬರಾಜು ಮಾಡುತ್ತಿತ್ತು. ಇದರಿಂದ ಸ್ಥಳೀಯ ಜನತೆಗೆ ನೀರಿನ ಯಾವುದೇ ತೊಂದರೆ ಕಾಡಿದ್ದಿಲ್ಲ. ಆದರೆ, ಈ ಬಾರಿ ಪಟ್ಟಣದ ಅನೇಕ ಬಡಾವಣೆಗಳಲ್ಲಿ ಕೆಲ ತಿಂಗಳಿಂದ ಕುಡಿವ ನೀರಿಗೆ ಸಂಚಕಾರ ಎದುರಾಗಿದೆ. ಎಲ್ಲ ಓಣಿಗಳ ನಿವಾಸಿಗಳು ಕುಡಿವ ನೀರು ಪೂರೈಕೆಯ ವ್ಯತ್ಯಯದಿಂದಾಗಿ ಕೊಡ ಹಿಡಿದು ಅಲೆದಾಡುವುದು ಸಾಮಾನ್ಯವಾಗಿದೆ.
ನೀರಿಗಾಗಿ ಹರಸಾಹಸ: ಯಾವ ಓಣಿಯಲ್ಲಿ ಎಂದು ನೀರು ಬಿಡುತ್ತಾರೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಇದರಿಂದ ಮಹಿಳೆಯರು ಪುರಸಭೆಗೆ ಹಿಡಿಶಾಪ ಹಾಕಿ ಹಲವಾರು ಬಾರಿ ಖಾಲಿ ಕೊಡಗಳೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ಮಾಡಿದ್ದುಂಟು. ನೀರು ಸರಬರಾಜು ಮಾಡಿದ ಬಡಾವಣೆಗೆ ಹೋಗಿ ಒಂದು ಕೊಡ ನೀರು ಪಡೆಯಬೇಕೆಂದರೆ ಯುದ್ಧ ಮಾಡಿದಂತೆ ಎಂದು ನಾಗರಿಕರು ತಮ್ಮ ಗೋಳು ತೋಡಿಕೊಳ್ಳುತ್ತಾರೆ.
ಪುರಸಭೆ ಅಧಿಕಾರಿ ವರ್ಗ ನೀರಿನ ಕರ ತುಂಬಿಸಿಕೊಳ್ಳಲು ತೋರಿದ ಉತ್ಸುಕತೆ ಕುಡಿವ ನೀರಿನ ತೊಂದರೆ ನಿವಾರಣೆಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇದೇ ವಿಳಂಬ ನೀತಿ ಮುಂದುವರಿದರೆ ಎಲ್ಲ ಬಡಾವಣೆಗಳ ಜನ ಸಿಡಿದೇಳುತ್ತಾರೆ ಎನ್ನುವುದು ಜನರ ಆಕ್ರೋಶದ ಮಾತು.
ಶುದ್ಧ ನೀರಿನ ಘಟಕ ಸ್ಥಗಿತ: ಕಡು ಬಡವರಿಗೂ ಶುದ್ಧ ಕುಡಿವ ನೀರು ದೊರೆಯಲಿ ಎನ್ನುವ ಉದ್ದೇಶದಿಂದ ಕಳೆದ ವರ್ಷ ಬೇಸಿಗೆಯಲ್ಲಿ ಜನಪ್ರತಿನಿಧಿಗಳು ಸ್ಥಳೀಯ ಪುರಸಭೆ ಮತ್ತು ಹೈದರಾಬಾದಿನ ಸ್ಮಾರ್ಟ್ ಅಕ್ವಾಲಾಜಿಸ್ ಸಂಸ್ಥೆ ರು. 12 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ (ಆರ್ಓ ಪ್ಲ್ಯಾಂಟ್) 10 ಪೈಸೆಗೆ 1 ಲೀಟರ್ ಶುದ್ಧ ಕುಡಿವ ನೀರು ಪೂರೈಕೆ ಕೇಂದ್ರ ಕೆಲ ತಿಂಗಳ ಜನತೆಗೆ ಶುದ್ಧ ಕುಡಿವ ನೀರು ಒದಗಿಸಿ ಆಗಾಗ ಬಂದಾಗಿ-ಶುರುವಾಗಿ ಕಣ್ಣುಮುಚ್ಚಾಲೆ ಆಟ ನಡೆಸಿ ಈಗ 2 ತಿಂಗಳ ಹಿಂದೆ ಸಂಪೂರ್ಣ ಬಂದಾಗಿದೆ. ಇದರ ಸದುಪಯೋಗ ಪಡೆದ ಪಟ್ಟಣದ ಖಾಸಗಿ ಶುದ್ಧ ಕುಡಿವ ನೀರಿನ ಘಟಕಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್. ಇಂದಿನ ದರ ನಾಳಿಲ್ಲ ಅವರು ಕೇಳಿದಷ್ಟು ಹಣ ಕೊಟ್ಟು ನೀರು ಪಡೆಯುವ ಅನಿವಾರ್ಯತೆ ಬಂದೊದಗಿದ ಪರಿಣಾಮ ಜನ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನೀರಿನ ಸಮಸ್ಯೆ ಕುರಿತು ಡಿಸಿಗೆ ಮನವಿ ಸಲ್ಲಿಸಿದ್ದರಿಂದ ಪಟ್ಟಣದ ಹೊರ ಹೊಲಯದಲ್ಲಿನ ಖಾಸಗಿ ಕೊಳವೆ ಬಾವಿ ಸ್ವಾಧೀನ ಪಡೆದುಕೊಂಡು ಪಟ್ಟಣ ಜನತೆಗೆ ಕುಡಿವ ನೀರು ಪೂರೈಕೆಗೆ ಯತ್ನಿಸುತ್ತಿದ್ದೇವೆ. ಈಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಎಚ್.ಕೆ ಪಾಟೀಲ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಗಜೇಂದ್ರಗಡದಲ್ಲಿನ ನೀರಿನ ಸಮಸ್ಯೆ ನಿವಾರಣೆಗಾಗಿ ರು. 10 ಲಕ್ಷ ಬಿಡುಗಡೆ ಮಾಡಲಾಗಿದೆ. ಟ್ಯಾಂಕರ್ಗಳ ಮೂಲಕ ನೀರಿನ ಸರಬರಾಜು ಮಾಡಲಾಗುವುದು.
-ಮಹಾಂತೇಶ ಬೀಳಗಿ
ಪುರಸಭೆ ಮುಖ್ಯಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

