ನೀರಿಗೆ ಬರ ಜನ ತತ್ತರ
ಕನ್ನಡಪ್ರಭ ವಾರ್ತೆ, ರೋಣ, ಮೇ 27
2 ವರ್ಷಗಳ ಕಾಲ ಭೀಕರ ಬರಗಾಲದಿಂದ ನೀರಿನ ಮೂಲಗಳಾದ ಕೆರೆ, ಬಾವಿ, ಹಳ್ಳ, ಕೊಳವೆಬಾವಿಗಳು ಬತ್ತಿರುವ ಪರಿಣಾಮ ರೋಣ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿನ ಬರ ಆವರಿಸಿದೆ. ಹನಿ ನೀರಿಗೂ ಜನತೆ ಪರದಾಡುತ್ತಿದ್ದಾರೆ.
ರೋಣ ತಾಲೂಕು 97 ಹಳ್ಳಿ, 3 ಪಟ್ಟಣಗಳನ್ನು ಒಳಗೊಂಡಿದೆ. 4.5 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ದಿನಕ್ಕೆ ಸುಮಾರು 2 ಕೋಟಿ ಲೀಟರ್ ನೀರು ಅಗತ್ಯವಿದೆ. ಆದರೆ, ಸತತ ಬರಗಾಲದಿಂದ ನೀರಿನ ಮೂಲವಾದ ಅಂತರ್ಜಲ ಹಾಗೂ ಹಳ್ಳ, ನದಿಗಳು ಬತ್ತಿವೆ. ಅಲ್ಲದೆ ದಿನಕ್ಕೆ ಕೇವಲ 3 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದ್ದು, ವಿದ್ಯುತ್ ಕಣ್ಣುಮುಚ್ಚಾಲೆಯಿಂದ ದಿನಕ್ಕೆ 1 ಕೋಟಿಯಷ್ಟು ಲೀಟರ್ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಈ ಬಾರಿಯೂ ಮಳೆ ಕೈಕೊಟ್ಟಿದ್ದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ನೀರಿನ ಬವಣೆ ನೀಗಿಸಿಕೊಳ್ಳಲು ಜನತೆ ಹೋರಾಟವನ್ನು ಮುಂದುವರಿಸಿದ್ದಾರೆ.
1215 ಕೊಳವೆ ಬಾವಿಗಳಿವೆ: ತಾಲೂಕಿನಲ್ಲಿ 1215 ಕೊಳವೆಬಾವಿಗಳಿವೆ. ಇದರಲ್ಲಿ 497 ಕುಡಿವ ನೀರಿಗೆ ಬಳಕೆಯಾಗುತ್ತಿವೆ. ಇನ್ನೂಳಿದವು ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದೆ. ತಾಲೂಕಿನಲ್ಲಿ ಜನತೆಗೆ ಕುಡಿವ ನೀರಿಗಾಗಿ 28 ಕೆರೆಗಳಿವೆ. ಅದರಲ್ಲಿ 20 ಕೆರೆಗಳಿಗೆ ಕಾಲುವೆಯಿಂದ ನೀರು ತುಂಬಿಸಲಾಗಿದೆ. ಮಳೆಯಾಗದಿದ್ದಲ್ಲಿ ಕೆರೆಗಳು ಬತ್ತಿ ಹೋಗುವ ಸಾಧ್ಯತೆಯಿದೆ. ಇದೇ ರೀತಿ ಅನಾವೃಷ್ಟಿ ಮುಂದುವರಿದಲ್ಲಿ ತಾಲೂಕಿನ ಜನತೆ ನೀರಿನ ತೀವ್ರ ಕೊರತೆ ಎದುರಿಸಬೇಕಾಗುತ್ತದೆ. ಗ್ರಾಪಂ ಮತ್ತು ತಾಲೂಕು ಆಡಳಿತ ಎಚ್ಚೆತ್ತು ಶೀಘ್ರ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂಬುದು ಜನತೆ ಆಗ್ರಹವಾಗಿದೆ. ಮಲಪ್ರಭಾ ನದಿ ನೀರನ್ನು ಅವಲಂಬಿಸಿರುವ ನದಿ ಪಾತ್ರದ ಗ್ರಾಮಗಳಾದ ಕರ್ಕಿಕಟ್ಟಿ, ಗುಳಗಂದಿ, ಮಾಳವಾಡ, ಮೇಗೂರ, ಮೆಣಸಗಿ, ಹೊಳೆಮಣ್ಣೂರ, ಹೊಳೆಆಲೂರ, ಬಿ.ಎಸ್.ಬೇಲೇರಿ, ಬಸರಕೋಡ ಗ್ರಾಮಗಳಲ್ಲಿ ಸದ್ಯ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಣಿಸಿದೆ. ರೋಣ ಪಟ್ಟಣ, ಹೊಸಹಳ್ಳಿ, ತಳ್ಳಿಹಾಳ, ಅರಹುಣಸಿ, ಕೊತಬಾಳ, ಯಾವಗಲ್, ಸವಡಿ, ಕೃಷ್ಣಾಪುರ, ಜಿಗಳೂರ, ಹಿರೇಹಾಳ, ಹೊನ್ನಿಗನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ತೀವ್ರ ಸಮಸ್ಯೆಯಿದ್ದು, ನೀರಿಗಾಗಿ ಎತ್ತಿನ ಚಕ್ಕಡಿ, ದ್ವಿಚಕ್ರ ವಾಹನ, ಟಂ ಟಂ, ಸೈಕಲ್, ತಳ್ಳುಗಾಡಿ, ಟಾಂಗಾ ಮೂಲಕ ನೀರು ತರಲು ದೂರದ ಸ್ಥಳಗಳಿಗೆ ಹೋಗುತ್ತಿದ್ದಾರೆ. ನೀರಿನ ತೀವ್ರ ಅಭಾವ ಉಂಟಾಗಿದ್ದ ತಾಲೂಕಿನ ಅಮರಗಟ್ಟಿ, ಲಕ್ಕಲಕಟ್ಟಿ, ಬೈರಾಪುರ ತಾಂಡಾ ಮತ್ತು ನಾಗೇಂದ್ರಗಡ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ರೋಣದಲ್ಲಿ ಸಮಸ್ಯೆ ಉಲ್ಬಣ: ರೋಣ ಪಟ್ಟಣವು 5 ವರ್ಷಗಳಿಂದ ನಿರಂತರವಾಗಿ ನೀರಿನ ಸಮಸ್ಯೆ ಎದುರಿಸುತ್ತಾ ಬಂದಿದೆ. ಪಟ್ಟಣಕ್ಕೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವಲ್ಲಿ ಸ್ಥಳೀಯ ಆಡಳಿತ ವರ್ಗ ಮತ್ತು ಅಧಿಕಾರಿಗಳು ಯಾವುದೇ ರೀತಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ಬಾರಿಯೂ ನದಿಯಲ್ಲಿ ನೀರಿನ ಕೊರತೆಯುಂಟಾಗಿದ್ದರಿಂದ 8ರಿಂದ 12 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಪಟ್ಟಣದ 8, 9, 10, 11,13,18, 19, 20 ಮತ್ತು 23ನೇ ವಾರ್ಡಗಳಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣವಾಗಿದೆ. ನದಿಯ ನೀರಿನ ಕೊರತೆಯಾದಲ್ಲಿ ಪುರಸಭೆಯ 16 ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಕೆ ಮಾಡಿದಲ್ಲಿ ಸಮಸ್ಯೆ ನಿವಾರಿಸಬಹುದು. ಆದರೆ, ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೆಲವು ವಾರ್ಡಗಳಲ್ಲಿ ಸದಸ್ಯರೆ ತಮ್ಮ ಸ್ವಂತ ಖರ್ಚಿನಿಂದ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ.
- ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

