ಮತ್ತೊಬ್ಬರತ್ತ ಬೆರಳು ತೋರಿಸಬೇಡಿ
ಕನ್ನಡಪ್ರಭ ವಾರ್ತೆ, ರೋಣ, ಮೇ 27
ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪಡಿತರ ಚೀಟಿಗೆ ಪ್ರತಿ ತಿಂಗಳು ಕೆಜಿಗೆ ರು. 1ರಂತೆ 30 ಕೆಜಿ ಅಕ್ಕಿಯನ್ನು ವಿತರಿಸುವ ಯೋಜನೆ ಜೂನ್ 1 ರಿಂದ ಪ್ರಾರಂಭವಾಗುತ್ತಿದ್ದು, ಅಧಿಕಾರಿಗಳು ಕೆಲಸ ಮಾಡುವ ಸಂದರ್ಭದಲ್ಲಿ ಇನ್ನೊಬ್ಬರ ಮೇಲೆ ಬೆರಳು ತೋರಿಸಬೇಡಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಇಲಾಖೆಗಳ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
2010ರ ಅವಧಿಯೊಳಗಿನ ಕಾರ್ಡುದಾರರಿಗೆ ಹೊಸ ಭಾವಚಿತ್ರ ತೆಗೆಸಬೇಕು ಎಂದು ಹೇಳಿದ ಅಧಿಕಾರಿಯ ಮಾತಿಗೆ ಅಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿವೆ. ಪಡಿತರದಾರರು ಭಾವಚಿತ್ರ ತೆಗೆಯಿಸಿಕೊಳ್ಳುವಾಗ ಮತ್ತು ತಂಬ್ ಮಾಡುವ ಸಂದರ್ಭದಲ್ಲಿ ಒಬ್ಬರನ್ನು ಸಾಕ್ಷಿ ಕರೆದುಕೊಂಡು ಬನ್ನಿ ಎನ್ನುತ್ತಿದ್ದಾರಂತೆ, ಫಲಾನುಭವಿಗಳು ಯಾರನ್ನು ಸಾಕ್ಷಿ ಕರೆದುಕೊಂಡು ಹೋಗಬೇಕು ಎನ್ನುವುದನ್ನು ಸರಿಯಾಗಿ ತಿಳಿಸಿ ವಿನಾಕಾರಣ ಕಾಲಹರಣ ಮಾಡಬೇಡಿ ಎಂದರು.
ಗ್ರಾಮೀಣ ಪ್ರದೇಶದಲ್ಲಿ 3 ಗಂಟೆ ವಿದ್ಯುತ್ ಇರುವುದರಿಂದ ಜನತೆಗೆ ಭಾವಚಿತ್ರ ಮತ್ತು ಕಾರ್ಡ್ ಪರಿಶೀಲನೆಯ ಸಮಯದಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು ತಂಬ್ರೈಟರ್ ಮತ್ತು ಸೋಲಾರಗಳ ವ್ಯವಸ್ಥೆ ಕಲ್ಪಿಸಿ ಎಂದು ತಾಪಂ ಅಧಿಕಾರಿ ಮತ್ತು ತಹಸೀಲ್ದಾರ್ರಿಗೆ ಸೂಚಿಸಿದರು. ನಂತರ ಮಾತನಾಡಿದ ತಾಪಂ ಇಓ ರುದ್ರಸ್ವಾಮಿ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಾಗ, ಶಾಸಕ ಜಿ.ಎಸ್.ಪಾಟೀಲ ಯಾವುದಾದರೂ ಮೂಲದಿಂದ ಖರೀದಿಸಿ ಸದ್ಯದ ಸ್ಥಿತಿಯಲ್ಲಿ ತೊಂದರೆಯಾಗಬಾರದು. ಆ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿಗಳು ಮತ್ತು ಆಹಾರ ಮಂತ್ರಿಗಳ ಜತೆ ಮಾತನಾಡಿ ಏನಾದರೂ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೇಳುವೆ ಎಂದರು. ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಮಠದ ಮಾತನಾಡಿ, 25 ಮತ್ತು 26 ರಂದು ರಾಜ್ಯಾದ್ಯಂತ ಸರ್ವರ್ ಸ್ಲೋ ಇತ್ತು ಹೀಗಾಗಿ ಸ್ವಲ್ಪ ವಿಳಂಬವಾಗಿದೆ ಎಂದಾಗ, ಹೌದು ಒಬ್ಬ ಫಲಾನುಭವಿಯ ಪಡಿತರ ಚೀಟಿ ಸರಿ ಮಾಡಲು ಅರ್ಧ ಗಂಟೆಯಾದರೆ ಇನ್ನುಳಿದವರಿಗೆ ತೊಂದರೆಯಾಗುತ್ತದೆ. ಆಯಾ ಗ್ರಾಪಂಗಳಿಗೆ ಸೂಚಿಸಿ ತಂಬ್ರೈಟರ್ ಖರೀದಿಸಲು ಒಂದಕ್ಕೆ ರು. 3 ಸಾವಿರ ಖರ್ಚಾಗುತ್ತದೆ ಜನತೆಯನ್ನು ಕಾಯಿಸುವುದನ್ನು ತಕ್ಷಣ ನಿಲ್ಲಿಸಿ ಎಂದರು. ನಂತರ ಮಾತನಾಡಿದ ಇಓ ನಾಳೆಯೇ ಎಲ್ಲ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೂಚಿಸುವೆ ಎಂದಾಗ ಎಲ್ಲದಕ್ಕೂ ಸಭೆ ಕರೆಯಬೇಡಿ. ಸೂಚನೆಯ ಮೂಲಕ ತಿಳಿಸಿ ಎಂದು ಶಾಸಕರು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಲಲಿತಾ ಪೂಜಾರ ವಹಿಸಿದ್ದರು.
ನಂತರ ತಾಲೂಕಿನ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಗತಿಯನ್ನು ತಿಳಿಸಿದರು. ಮತ್ತು ನೂತನವಾಗಿ ರೋಣ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲರನ್ನು ತಾಪಂ ಸದಸ್ಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಹಟ್ಟಿಮನಿ, ತಾಪಂ ಉಪಾಧ್ಯಕ್ಷೆ ರುದ್ರವ್ವ ತಾಳಿ, ಇಓ ರುದ್ರಸ್ವಾಮಿ, ಜಿಪಂ ಅಭಿಯಂತರ ವೀರಣ್ಣ ಕಾಳಪ್ಪನವರ ಸೇರಿದಂತೆ ತಾಪಂ ಸದಸ್ಯರು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

