ಗದಗ

ಪಡಿತರ ಚೀಟಿ: ನೆಟ್ ಸೆಂಟರ್‌ಗೆ ಮುಗಿಬಿದ್ದ ಜನತೆ

Published On :

ಕನ್ನಡಪ್ರಭ ವಾರ್ತೆ, ಗದಗ/ನರೇಗಲ್ಲ, ಮೇ 28
ಪಡಿತರ ಚೀಟಿ ಇಲ್ಲದವರಿಗೆ ಹೊಸ ಪಡಿತರ ಚೀಟಿ ಕೊಡುತ್ತಾರೆ ಎನ್ನುವ ಸುದ್ದಿ ತಿಳಿದಿದ್ದೆ ತಡ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಜಿಲ್ಲೆಯಾದ್ಯಂತ ಆನ್‌ಲೈನ್ ಸೆಂಟರ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ.
ಈಚೆಗೆ ಜರುಗಿದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಈಗ ವಿಧಾನಸಭಾ ಚುನಾವಣಾ ಕಾರ್ಯ ಪೂರ್ಣಗೊಂಡಿದ್ದು, ಸರ್ಕಾರವು ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆದೇಶಿಸಿದೆ. ಇದರಿಂದಾಗಿ ಗದಗ ನಗರ ಸೇರಿದಂತೆ ರೋಣ, ನರಗುಂದ, ಮುಂಡರಗಿ, ಶಿರಹಟ್ಟಿ, ನರೇಗಲ್ಲ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದದೇ ಇರುವವರು ತಮ್ಮ ಕುಟುಂಬ ಸಮೇತ ನೆಟ್ ಸೆಂಟರ್‌ನ ಬಳಿ ದಿನವಿಡಿ ಕಾಯುತ್ತಾ ಕುಳಿತಿರುತ್ತಾರೆ.
ಅವಶ್ಯಕ ದಾಖಲಾತಿಗಳು: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಈ ದಾಖಲಾತಿಗಳನ್ನು ಹೊಂದಿರುವುದು ಅವಶ್ಯ. ಅರ್ಜಿದಾರನ ವಿದ್ಯುತ್ ಬಿಲ್, ಇವರಿಗೆ ರೇಷನ್ ಕಾರ್ಡ್ ಇಲ್ಲ ಎಂಬುದನ್ನು ದೃಢೀಕರಿಸಲು ಒಬ್ಬ ಸಾಕ್ಷಿದಾರ ಬೇಕು. ಈ ಸಾಕ್ಷಿದಾರನ ವಿದ್ಯುತ್ ಬಿಲ್ ಮತ್ತು ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕು. ಜತೆಗೆ ಸಾಕ್ಷಿದಾರ ಈಗಾಗಲೆ ಚಾಲ್ತಿಯಲ್ಲಿರುವ ತನ್ನ ಪಡಿತರ ಚೀಟಿಯ ಒಂದು ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಅರ್ಜಿದಾರ ತನ್ನ ಕುಟುಂಬದ ಸದಸ್ಯರ ದಾಖಲೆಗಳನ್ನು, ಅಂದರೆ ಚುನಾವಣಾ ಗುರುತಿನ ಚೀಟಿ, ಲಗ್ನ ಪತ್ರಿಕೆ (ಹೊಸದಾಗಿ ಮದುವೆಯಾಗಿ ಬಂದ ಸೊಸೆಯಂದಿರಿಗೆ) ಜನನ ಪ್ರಮಾಣ ಪತ್ರ, ಶಾಲಾ ದೃಢೀಕರಣ, ಬ್ಯಾಂಕಿನ ಪಾಸ್‌ಬುಕ್‌ನ ಜೆರಾಕ್ಸ್, ಪಾನ್‌ಕಾರ್ಡ್ ಇವುಗಳಲ್ಲಿ ಯಾವುದಾರೊಂದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಮನೆಯಲ್ಲಿನ 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲ ಸದಸ್ಯರನ್ನೂ ಕಡ್ಡಾಯವಾಗಿ ಸೆಂಟರ್‌ಗೆ ಕರೆದುಕೊಂಡು ಬರಬೇಕು.
ಅರ್ಜಿ ಸಲ್ಲಿಸುವ ವಿಧಾನ: ರೇಷನ್ ಕಾರ್ಡ್ ಬೇಕಾದವರು ಮೊದಲು ತಮ್ಮ ಮೊಬೈಲ್‌ನಿಂದ ಆಹಾರ ಇಲಾಖೆಗೆ ಒಂದು ಸಂದೇಶವನ್ನು (ಮೆಸೇಜ್) 9212357123 ಗೆ ಕಳಿಸಬೇಕು. ಅದರಲ್ಲಿ ಆರ್.ಸಿ.ನ್ಯೂ ಎಂದು ಟೈಪ್ ಮಾಡಿ ತಮ್ಮ ಹೆಸರು, ತಂದೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಬೇಕು. ಮೊಬೈಲ್‌ನಿಂದ ಸಂದೇಶ ಆಹಾರ ಇಲಾಖೆಗೆ ತಲುಪಿದ ನಂತರ ಅವರಿಂದ ಈ ದೂರವಾಣಿಗೆ ಒಂದು ಸಂದೇಶ ಬರುತ್ತದೆ. ಈ ಸಂದೇಶವನ್ನು ಪಡೆದುಕೊಂಡ ವ್ಯಕ್ತಿ ನೆಟ್ ಸೆಂಟರ್‌ಗೆ ಬಂದು ತನ್ನ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ರು. 50 ಶುಲ್ಕ ವಿಧಿಸಲಾಗುತ್ತದೆ.
ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ: ನಗರ ಪ್ರದೇಶದಲ್ಲಿರುವ ಜನರು ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿರುವುದು ಸಾಮಾನ್ಯ. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ನೆಟ್ ಸೆಂಟರ್ ಮುಂದೆ ದಿನವಿಡಿ ಕಾಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ದಿನವಿಡಿ ಸರದಿ ಸಾಲಿನಲ್ಲಿ ನಿಂತು ಕಾದರೂ ತಮ್ಮ ಸರದಿ ಬರುವುದರೊಳಗೆ ವೇಳೆಯಾಗಿ ಅಂಗಡಿ ಬಂದ್ ಮಾಡಿ, ನಾಳೆ ಮತ್ತೆ ಬರುವ ಪರಿಸ್ಥಿತಿ ಉದ್ಭವವಾಗಿದೆ. ಮರುದಿನ ನೆಟ್ ಸೆಂಟರ್‌ಗೆ ಬಂದರೆ ಮತ್ತೆ ಅದೇ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.