ಗದಗ

ಸಾಂಕ್ರಾಮಿಕ ರೋಗ: ಮುಂಜಾಗ್ರತೆ ಕ್ರಮಗಳು

Published On :

ಗದಗ: ರಾಜ್ಯದ ವಿವಿಧ ಕಡೆಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೀಜ್ವರ, ಚಿಕೂನ್‌ಗುನ್ಯಾ, ಮಲೇರಿಯಾ, ಕರುಳುಬೇನೆ, ಕಾಲರಾ, ಕಾಮಾಲೆ, ವಿಷಮಶೀತಜ್ವರ ಹರಡುತ್ತಲಿದ್ದು, ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದೆ.  ರೋಗಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು. ಡೆಂಘೀಜ್ವರ, ಚಿಕೂನ್ ಗುನ್ಯಾ ರೋಗಗಳು ಈಡೀಸ್ ಇಜಿಪ್ಟೈ ಎನ್ನುವ ಸೊಳ್ಳೆಯ ಕಡಿತದಿಂದ ಬರುವ ರೋಗಗಳಾಗಿದ್ದರಿಂದ ಈ ಸೊಳ್ಳೆಗಳು ತಿಳಿ ನೀರಿನಲ್ಲಿಯೇ ತನ್ನ ಸಂತಾನ ಅಭಿವೃದ್ಧಿ ಮಾಡುವುದರಿಂದ ತಿಳಿ ನೀರು ಸುಲಭವಾಗಿ ಮನೆಯಲ್ಲಿನ ನೀರಿನ ಪರಿಕರಗಳಲ್ಲಿಯೇ ಸಿಗುವುದರಿಂದ ಅಲ್ಲಿಯೇ ವೃದ್ಧಿಯಾಗುತ್ತವೆ. ಆದ್ದರಿಂದ ನೀರಿನ ಸಂಗ್ರಹಗಳಾದ ಹಂಡೆ, ಹರವಿ, ಡೋಣಿ, ಬಾನಿ, ಪ್ಲಾಸ್ಟಿಕ್ ಡ್ರಮ್, ಬ್ಯಾರಲ್, ಸಿಮೆಂಟ್ ಟ್ಯಾಂಕ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು ನೀರು ತುಂಬಿ ಕಡ್ಡಾಯವಾಗಿ ಮುಚ್ಚಿಡಬೇಕು. ಇದರಿಂದ ಸೊಳ್ಳೆಗಳಿಗೆ ನೀರು ಸಿಗದಂತಾಗುವುದು. ಘನತ್ಯಾಜ್ಯ ವಸ್ತುಗಳಾದ ತೆಂಗಿನ ಚಿಪ್ಪು, ಎಳನೀರು, ಬಿಸಾಕಿದ ಟೈರ್, ಒಡೆದ ಬಾಟಲಿ ಇತ್ಯಾದಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು. ನಿತ್ಯ ಮನೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕುವುದು. ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು ಹಾಗೂ ಮೈತುಂಬ ಬಟ್ಟೆ ಧರಿಸುವುದು. ಜೈವಿಕ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಲಾರ್ವಾಹಾರಿ ಮೀನುಗಳನ್ನು ನೀರಿನ ಮೂಲಗಳಿಗೆ ಬಿಡುವುದು. ಈ ಮೀನುಗಳು ಸೊಳ್ಳೆಗಳ ಲಾರ್ವಾಗಳನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ. (ಲಾರ್ವಾಹಾರಿ ಮೀನುಗಳು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ) ಆರೋಗ್ಯ ಇಲಾಖೆಯ ಸಿಬ್ಬಂದಿಯು ಮನೆ ಮನೆಗೆ ಭೇಟಿ ನೀಡಿ ನೀರಿನ ಪರಿಕರಗಳಲ್ಲಿ ಲಾರ್ವಾಗಳ ಉತ್ಪತ್ತಿಯ ಸಮೀಕ್ಷೆ ಹಾಗೂ ಫಾಗಿಂಗ್ ಮಾಡಲು ಬಂದಾಗ ಅವರಿಗೆ ಸಹಕರಿಸಬೇಕು. ಗ್ರಾಮಗಳಿಗೆ ಬರುವ ನಕಲಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯದೇ, ನುರಿತ ವೈದ್ಯರ ಹತ್ತಿರ ರೋಗಿಗಳು ಚಿಕಿತ್ಸೆ ಪಡೆಯಬೇಕು. ನೀರನ್ನು ಕಾಯಿಸಿ ಆರಿಸಿ ಸೋಸಿ ಕುಡಿಯಬೇಕು. ಮೇಲಿನ ಎಲ್ಲ ಕ್ರಮಗಳನ್ನು ಸಾರ್ವಜನಿಕರು ಕೈಗೊಂಡು ಸಾಂಕ್ರಾಮಿಕ ರೋಗಗಳು ಹರಡದಂತೆ ಸಹಕರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಸತಿ ಶಾಲೆಗೆ ಆಯ್ಕೆ
ಹೊಳೆಆಲೂರ: 2013-14ನೇ ಸಾಲಿನ 8ನೇ ತರಗತಿಗೆ ಬೆಳಗಾವಿ ಜಿಲ್ಲಾ ಚಂದರಗಿಯ ಸಂಯುಕ್ತ ಕ್ರೀಡಾ ವಸತಿ ಶಾಲೆಗೆ ಹೊಳೆಆಲೂರು ಸಮೀಪದ ಬೆನಹಾಳ ಗ್ರಾಮದ ಹರ್ಷದ ನಭಿಸಾಹೇಬ ಮುಲ್ಲಾ ಆಯ್ಕೆಯಾಗಿದ್ದಾನೆ. ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿ ಹರ್ಷದ ಸಾಧನೆಗೆ ಶಾಲಾ ಪ್ರಧಾನಗುರು ಮತ್ತು ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.