ಗದಗ

ಪಾರ್ವತಿ ಕೊಳ್ಳಕ್ಕೆ ರಕ್ಷಣೆ ಅಗತ್ಯ

Published On :

ಕನ್ನಡಪ್ರಭ ವಾರ್ತೆ, ರೋಣ, ಮೇ 28
ಮಳೆಗಾಲದುದ್ದಕ್ಕೂ ಕೊಳ್ಳದಿಂದ ನೀರು ಹರಿದು ಸಂಗ್ರಹವಾಗಿ ಸುತ್ತಲಿನ ಹತ್ತು ಹಳ್ಳಿಗಳ ಜನ ಜಾನುವಾರುಗಳಿಗೆ, ರೈತರ ಭೂಮಿಗೆ ನೀರುಣಿಸುವದರ ಜತೆಗೆ ನೂರಾರು ಕೊಳವೆಬಾವಿಗಳ ಪುನಶ್ಚೇತನಕ್ಕೆ ಸಹಕಾರಿಯಾಗಿದ್ದು, ಇದರ ರಕ್ಷಣೆ ಅತ್ಯಂತ ಆವಶ್ಯಕ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಮಂಗಳವಾರ ತಾಲೂಕಿನ ಶಾಂತಗೇರಿ ಗುಡ್ಡದ ಹತ್ತಿರದ 58 ಎಕರೆ ವಿಶಾಲವಾದ ಪ್ರದೇಶದಲ್ಲಿರುವ ಪಾರ್ವತಿ ಕೊಳ್ಳದ ಸುತ್ತಲೂ ವಾಸಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪಾರ್ವತಿ ಕೊಳ್ಳದ ಕೆರೆ ವೀಕ್ಷಿಸಿ ಮಾತನಾಡಿದರು.
ಈ ವಿಶಾಲವಾದ ಕೆರೆಯನ್ನು 1973-74ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು, ಈ ಭಾಗದ ಜನ ಜಾನುವಾರುಗಳಿಗೆ ಕುಡಿವ ನೀರು ಹಾಗೂ ಸುತ್ತಲಿನ 600 ಎಕರೆ ಪ್ರದೇಶ ನೀರಾವರಿ ಹೊಂದುವಂತೆ ವಿಶಾಲವಾದ ಕೆರೆ ನಿರ್ಮಿಸಿದ್ದರು. ಈ ಕೆರೆಯಿಂದ ತಾಲೂಕಿನ ಬೊಮ್ಮಸಾಗರ, ಸರ್ಜಾಪುರ, ಶಾಂತಗೇರಿ, ಬಳಗೊಡ, ಗುಡ್ಡದಮಲ್ಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳು ನೀರಾವರಿ ಹೊಂದಿದ್ದವು. ಆದರೆ, ಸದ್ಯ ನಿರ್ಮಿಸಲಾದ ಕೆರೆಯ ಯೋಜನೆಯಿಂದ ರೈತರಿಗೆ ಅನ್ಯಾಯವಾಗಿದೆ. ರು. 28 ಕೋಟಿ ಖರ್ಚು ಮಾಡಿ ಕುಡಿವ ನೀರಿನ ಯೋಜನೆ ಮಾಡುವ ಅವಶ್ಯಕತೆ ಏನು ಇತ್ತು. ಕೋಟ್ಯಂತರ ಹಣದಲ್ಲಿ ಕೆರೆ ನಿರ್ಮಿಸಿಸುತ್ತಿರುವ ನಿಮಗೆ ಬೇರೆ ಕಡೆ ಸ್ಥಳ ಸಿಗಲಿಲ್ಲವೇ ಅಥವಾ ಇದ್ದ ಕೆರೆಯ ಹೂಳೆತ್ತಿ ದುಡ್ಡು ಹೊಡೆಯುವ ಹುನ್ನಾರವಿದ್ದು, ಕಾಣದ ಕೈಗಳ ಕೈವಾಡವಿದೆ. ಇಂಥ ಸಂದರ್ಭದಲ್ಲಿ ರೈತರ ಸಲಹೆ ಪಡೆಯುವುದು ಅಧಿಕಾರಿಗಳ ಕರ್ತವ್ಯ ಎಂದು ಸ್ಥಳದಲ್ಲಿದ್ದ ಪಂಚಾಯತ್ ರಾಜ್ ಉಪವಿಭಾಗದ ಎಇಇ ವಿ.ಕೆ. ಕಾಳಪ್ಪನವರನ್ನು ತರಾಟೆಗೆ ತೆಗೆದುಕೊಂಡ ಅವರು, ಆಯಾರಾಂ, ಗಯಾರಾಂ ಲೆಕ್ಕ ಬೇಡ ಇದರ ಸಮಗ್ರ ವರದಿ ನನಗೆ ಸಲ್ಲಿಸಬೇಕು. ಈ ಬಗ್ಗೆ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ ಎಂದು ತಾಕೀತು ಮಾಡಿದರು.
ಗ್ರಾಮಸ್ಥರ ಆರೋಪ: ಈ ಹಿಂದಿನ ಶಾಸಕರಿಗೆ ಇಲ್ಲಿ ಕೆರೆ ನಿರ್ಮಿಸುವುದು ಬೇಡ. ಇದರಿಂದ ರೈತರಿಗೆ ತೊಂದರೆ ಹೆಚ್ಚು, ನೈಸರ್ಗಿಕವಾದ ಕೆರೆಯಲ್ಲಿ ನೀರು ತಾನಾಗಿಯೇ ನಿಲ್ಲುತ್ತದೆ. ಮಿಕ್ಕಿದ್ದು ಹರಿದು ಹೋಗಿ ರೈತರ ಕೊಳವೆಬಾವಿಗಳಿಗೆ ಅಂತರ್ಜಲ ಹೆಚ್ಚಿಸುತ್ತದೆ ಎಂದು ವಿನಂತಿಸಿದರೂ, ಯಾವದೇ ಒಬ್ಬ ರೈತರನ್ನು ಕೇಳದೇ ಇಲ್ಲಿನ ರೈತರ ವಿರೋಧದ ಮಧ್ಯೆಯೇ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಚಾಲು ಮಾಡಿದ್ದಾರೆ ಎಂದು ಗ್ರಾಮಸ್ಥರು ಶಾಸಕ ಜಿ.ಎಸ್. ಪಾಟೀಲ್ ಎದುರು ಆರೋಪಿಸಿದರು.
ಈಶಪ್ಪ ರಾಠೋಡ, ಶರಣಗೌಡ ಪಾಟೀಲ, ಬಸನಗೌಡ ಪಾಟೀಲ, ಶೇಖಣ್ಣ ಪಾಟೀಲ, ಅಂದಪ್ಪ ನಾಗನೂರ, ಹುವಪ್ಪ ಲಮಾಣಿ, ಶಿವಾನಂದ ರಾಠೋಡ, ಎಂಜಿನೀಯರ್ ದ್ಯಾಮಣ್ಣವರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.