ಗದಗ

ತಾಪಂ ಅಧ್ಯಕ್ಷರಿಂದ ಅಧಿಕಾರಿಗಳ ತರಾಟೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಮೇ 29
ತಾಲೂಕಿನಲ್ಲಿ 2 ವರ್ಷಗಳಿಂದ ತೀವ್ರ ಬರಗಾಲ ಸಂಭವಿಸಿದ್ದು, ಗ್ರಾಮೀಣ ಭಾಗದ ಜನತೆಗೆ ಕುಡಿವ ನೀರು ಸೇರಿದಂತೆ ಮೂಲ ಸೌಲಭ್ಯ ದೊರಕಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ ಮಂಗಳವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ಗಾಳಿಗೆ ಅಲೆದಾಡಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಜನತೆಗೆ ಕುಡಿವ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ನಾವು ಮನವಿ ಮಾಡಿಕೊಂಡರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದರು. ನಂತರ ಹೆಸ್ಕಾಂ ಇಲಾಖೆಯ ಅಧಿಕಾರಿ ಮಾತನಾಡಿ, ಕೆಲವು ತಾಂತ್ರಿಕ ಕಾರಣಗಳಿಂದ ಕೆಲವು ಕಂಬಗಳನ್ನು ದುರಸ್ತಿ ಮಾಡಲಾಗಿಲ್ಲ. ಆದಷ್ಟು ಬೇಗನೆ ಸರಿಪಡಿಸಲಾಗುವುದು ಎಂದರು.
ತಾಪಂ ಸದಸ್ಯ ವಿ.ಎನ್. ಕೊಳ್ಳಿ ಹಾಗೂ ಬಿ.ಎಸ್. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಿಂದ ಬಂದ ರೋಗಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಹೇಳಿದಾಗ ಅದಕ್ಕೆ ವೈದ್ಯಾಧಿಕಾರಿ ರೇಣುಕಾ ಕೋರನ್ನವರ ಮಾತನಾಡಿ, ಆ ರೋಗಿಗಳು ಆಸ್ಪತ್ರೆಗೆ ಬಂದಾಗ ಯಾವ ಸಹಾಯಕ ವೈದ್ಯರು ಇದ್ದರು ಹೇಳಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಅವರು, ತಾಲೂಕಿನಲ್ಲಿ 6 ಜನಕ್ಕೆ ಡೆಂಘೀ ಜ್ವರ ಕಂಡು ಬಂದಿದೆ. ಈ ರೋಗಿಗಳಿಗೆ ಕೊಡಬೇಕಾದ ಚಿಕಿತ್ಸೆ ನೀಡಿದೆ. ಗ್ರಾಮ ಪಂಚಾಯಿತಿಯವರು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದರು.
ಸದಸ್ಯ ಮಲ್ಲಪ್ಪ ಮೇಟಿ ಮಾತನಾಡಿ, ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸರ್ಕಾರದಿಂದ ರೈತರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳು ಬಂದರೂ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದ ರೈತರಿಗೆ ಸರಿಯಾದ ತಿಳಿವಳಿಕೆ ನೀಡದೇ ಇರುವುದರಿಂದ ಈ ಯೋಜನಗಳು ಕೆಲವು ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿವೆ ಎಂದು ಆರೋಪಿಸಿದರು. ಕೃಷಿ ಅಧಿಕಾರಿ ಮಾತನಾಡಿ, ಪ್ರತಿ ವರ್ಷ ಪತ್ರಿಕೆ ಮೂಲಕ ರೈತರಿಗೆ ಸಿಗಬೇಕಾದ ಯೋಜನೆಗಳ ಬಗ್ಗೆ ತಿಳಿಸಲಾಗುತ್ತದೆ. ಆದರೆ, ಈ ಪ್ರಸಕ್ತ ವರ್ಷದಿಂದ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ನಂತರ ವಿವಿಧ ಇಲಾಖೆಯ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ಸದಸ್ಯ ವಿದ್ಯಾವತಿ ಭೂಮಣ್ಣವರ, ಶಾಂತವ್ವ ಯಲಿಗಾರ, ಭೀಮವ್ವ ಶಿರಹಟ್ಟಿ, ರುದ್ರವ್ವ ದೊಡಮನಿ, ಹೆಬ್ಬಳವ್ವ ದೊಡಮನಿ, ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ತೋಟಗಾರಿಕೆ, ಕಂದಾಯ, ನೀರಾವರಿ, ಸಮಾಜ ಕಲ್ಯಾಣ, ಗ್ರಾಪಂ ಸೇರಿದಂತೆ ಎಲ್ಲ ಇಲಾಖೆ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.