ರಭಸದ ಮಳೆ: ಅಪಾರ ಹಾನಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 29
ಮಂಗಳವಾರ ಸಂಜೆ ಸುರಿದ ಮಳೆಗೆ ಸಮೀಪದ ಸೂರಣಗಿ ಹಾಗೂ ಬಾಲೆಹೊಸೂರ ಗ್ರಾಮದಲ್ಲಿ ಹಲವು ಮನೆಗಳು ಭಾಗಶಃ ಬಿದ್ದು ಹಾನಿಗೊಳಗಾಗಿವೆ. ಕೆಲ ಮನೆಗಳೊಳಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಬರೆ, ಆಹಾರ ಧಾನ್ಯಗಳು ಕೊಚ್ಚಿಕೊಂಡು ಹೋಗಿವೆ.
ರಭಸದಿಂದ ಸುರಿದ ಮಳೆಯಿಂದಾಗಿ ಮನೆಯಲ್ಲಿ ನೀರು ತುಂಬಿದ ಪರಿಣಾಮ ರಾತ್ರಿಯೆಲ್ಲ ನಿದ್ರೆಯಿಲ್ಲದೆ ಜನರು ತೊಂದರೆ ಅನುಭವಿಸುವಂತಾಯಿತು. ಮಳೆಯ ಹೊಡೆತಕ್ಕೆ ಹೊಲದಲ್ಲಿನ ಬದುವುಗಳು ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ.
ಸೂರಣಗಿ ಗ್ರಾಮದ ಸವಣೂರ ರಸ್ತೆ ಮತ್ತು ಸಿದ್ದಾಪುರ ರಸ್ತೆಗೆ ಹೊಂದಿಕೊಂಡಿರುವ ಪ್ರಾಥಮಿಕ ಶಾಲೆ ಹತ್ತಿರ ಸಿಡಿಯಲ್ಲಿ ನೀರು ಸರಿಯಾಗಿ ಹಾಯ್ದು ಹೋಗದೆ ಗ್ರಾಮದ ಹರಿಜನ ಕೇರಿಯ ಮನೆಗಳೊಳಗೆ ನುಗ್ಗಿ ಅಪಾರ ಹಾನಿ ಉಂಟುಮಾಡಿದೆ. ಸೂರಣಗಿ ಗ್ರಾಮದಲ್ಲಿನ ಲಂಬಾಂಣಿ ತಾಂಡಾದಲ್ಲಿನ ಮನೆಯೊಳಗೆ ನೀರು ನುಗ್ಗಿ ದವಸ ಧಾನ್ಯ ಹಾನಿಯಾಗಿವೆ.
ರಾತ್ರಿಯೆಲ್ಲ ಜಾಗರಣೆ: ಮಳೆಯ ಕಾಟಕ್ಕೆ ಹಾವು, ಚೇಳು ಮನೆಯೊಳಗೆ ನುಗ್ಗುತ್ತಿವೆ. ಇದರಿಂದ ಜನತೆ ಭಯದಿಂದ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ ಎಂದು ಗಂಗವ್ವ ಲಮಾಣಿ ತಿಳಿಸಿದಳು. ಮನೆಗೆ ನೀರು ನುಗ್ಗಿ ತೊಂದರೆ ಎದುರಿಸುತ್ತಿದ್ದರೂ ಗ್ರಾಪಂ ಸೂಕ್ತ ಚರಂಡಿ ಹಾಗೂ ರಸ್ತೆನಿರ್ಮಾಣ ಮಾಡುತ್ತಿಲ್ಲ. ಗ್ರಾಪಂನ ನಿರ್ಲಕ್ಷ್ಯದಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಚೆಂದ್ರಪ್ಪ ಲಮಾಣಿ, ತೋಪಣ್ಣ ಲಮಾಣಿ, ಬಾಬಣ್ಣ ಲಮಾಣಿ, ಬಾಬಣ್ಣ ಮಂಜುನಾಥ ಲಮಾಣಿ, ಮೋದಿನಸಾಬ ಕೋಲಕಾರ ಅಸಮಾಧಾನ ವ್ಯಕ್ತಪಡಿಸಿದರು.
ತಹಸೀಲ್ದಾರ್ ಭೇಟಿ: ಸೂರಣಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯಿಂದ ತೊಂದರೆಗೆ ಒಳಗಾದ ಸ್ಥಳಗಳಿಗೆ ತಹಸೀಲ್ದಾರ್ ಆರ್.ಡಿ. ಉಪ್ಪಿನ ಭೇಟಿ ನೀಡಿ, ಪರಿಶೀಲನೆ ನಡೆಸಿ ಹಾನಿಯ ಅಂದಾಜು ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಮಳೆಯ ನೀರು ಹಾಯ್ದು ಹೋಗಲು ಇರುವ ಅಡೆತಡೆಗಳನ್ನು ತೆರವುಗೊಳಿಸುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಯಿತು. ತಾಪಂ ಸದಸ್ಯ ಕೊಟೆಪ್ಪ ವರ್ದಿ, ಉಪತಹಸೀಲ್ದಾರ್ ಮೋಹನ ಕಟ್ಟಿಮನಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ, ಬಸಣ್ಣ ಸಾಸಲವಾಡ, ಪಿಡಿಓ ಎಂ.ಪಿ. ಮಾತಾಡೆ ಹಾಜರಿದ್ದರು.
ಅಧಿಕಾರಗಳಿಗೆ ತರಾಟೆ: ಮಳೆಯಿಂದ ತೊಂದರೆಗೆ ಒಳಗಾದ ಇನ್ನೊಂದು ಗ್ರಾಮ ಬಾಲೆಹೊಸೂರಿನಲ್ಲಿ ಎಸ್ಸಿ, ಎಸ್ಟಿ, ಪ್ಲಾಟ್ಗಳ ನಿವಾಸಿಗಳ ಮನೆಯೊಳಗೆ ಕೆರೆಯ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ ಎಂದು ಗ್ರಾಮಸ್ಥರು ಬುಧವಾರ ಮಧ್ಯಾಹ್ನ ಗ್ರಾಪಂ ಕಚೇರಿ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿ ಹಕ್ಕಾಪಿಕ್ಕಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ನಮ್ಮೂರಿನ ಕೆರೆಯ ನೀರು ಬಡವರ ಮನೆಯೊಳಗೆ ನುಗ್ಗಿ ಬಟ್ಟೆ, ದವಸ ಧಾನ್ಯ ಹಾಳಾಗಿ ಹೋಗಿವೆ. ತಾಲೂಕಿನ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಕೆರೆಯ ನೀರು ಊರ ಒಳಗೆ ಬರುತ್ತಿರುವುದರಿಂದ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಊರಿನ ಮುಂದಿನ ಬೃಹತ್ ಕೆರೆಯನ್ನು ಮುಚ್ಚಿಹಾಕಿದ್ದಾರೆ. ತಾಲೂಕಿನ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಾಪಂ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಕ್ಕಾಪಿಕ್ಕಿ ಹಾಗೂ ಜಿಪಂ ಎಇಇ ಅಕ್ಕೂರ ಅವರನ್ನು ಸುತ್ತುವರೆದು ಪ್ರತಿಭಟನೆ ನಡೆಸಿದರು. ಕೆರೆಯ ನೀರು ಊರೊಳಗೆ ಬಾರದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಿಮ್ಮನ್ನು ಊರಿನಿಂದ ಹೊರಗೆ ಕಳಿಸುವುದಿಲ್ಲವೆಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಬಾಲೆಹೊಸೂರ ಗ್ರಾಮದ ಎನ್.ಬಿ. ಕಡೆಮನಿ, ಭೀಮಪ್ಪ ಗಂಗಾಪುರ, ಮಹಾಂತಪ್ಪ ಗುಡಗೇರಿ, ಯಮನಪ್ಪ ಕಡೆಮನಿ, ಪಿ.ಜಿ. ಕಡೆಮನಿ, ಮಂಜುನಾಥ ಕಡೆಮನಿ, ಬಸವಣ್ಣೆಪ್ಪ ಕಡೆಮನಿ, ಮಂಜಪ್ಪ ದೇವರಮನಿ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

