ಸಮ್ಮೇಳನಾಧ್ಯಕ್ಷ ರಾಮಣ್ಣ ಬ್ಯಾಟಿಯವರಿಗೆ ಆಹ್ವಾನ
ಗದಗ: ಜೂನ್ 10 ರಂದು ಗದಗ ತಾಲೂಕಿನ ಮುಳಗುಂದದಲ್ಲಿ ನಡೆಯಲಿರುವ ಗದಗ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೆಟಗೇರಿಯ ಸಾಹಿತಿ, ಬರಹಗಾರ ರಾಮಣ್ಣ ಬ್ಯಾಟಿಯವರನ್ನು ಗದಗ ತಾಲೂಕು ಕಸಾಪ ಹಾಗೂ ಮುಳಗುಂದದ ಹಿರಿಯ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದ್ದು, ಮಂಗಳವಾರ ಬೆಟಗೇರಿಯ ಬ್ಯಾಟಿಯವರ ಮನೆಗೆ ಕಸಾಪ ಸದಸ್ಯರು ಭೇಟಿ ನೀಡಿ ಆಹ್ವಾನಿಸಿದರು. ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ರಾಮಣ್ಣ ಬ್ಯಾಟಿಯವರು ಕಡು ಬಡತನದಲ್ಲಿ ಬೆಳೆದು ನೇಕಾರಿಕೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಹಲವಾರು ಸಾಹಿತ್ಯಿಕ ಕೃತಿಗಳನ್ನು ಹೊರತಂದಿರುವುದು ನಿಜಕ್ಕೂ ಕನ್ನಡಾತಾಯಿ ಭುವನೇಶ್ವರಿಗೆ ಮಾಡಿದ ಸೇವೆ. ಇದನ್ನು ಗುರುತಿಸಿದ ಗದಗ ತಾಲೂಕಾ ಕಸಾಪದ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು ಪದಾಧಿಕಾರಿಗಳು ಪ್ರಶಂಸನಾರ್ಹರು. ರಾಮಣ್ಣ ಬ್ಯಾಟಿಯವರು ಇದುವರೆಗೂ 38 ಕೃತಿಗಳ ರಚನೆ, 9 ಪುರಾಣ, 16 ಗದ್ಯ ಕೃತಿ, 10 ಕಾವ್ಯ, 3 ಗದ್ಯ ಪದ್ಯಗಳನ್ನು ರಚಿಸಿದ್ದಾರೆ. ಸ್ಥಳ ಪುರಾಣ, ಸಾಧು ಸಂತರು, ಮಹಾತ್ಮರು, ಮಹಾಪುರುಷರು ಹಾಗೂ ದೇವತೆಗಳ ಬಗೆಗೆ ಕೃತಿ ರಚಿಸಿದ್ದಾರೆ. ಅಂಬೇಡ್ಕರ್ ಪುರಾಣ, ಗೌರಿಶಂಕರ ಚರಿತಾಮೃತ ಎನ್ನುವ ಎರಡು ಮಹಾಕಾವ್ಯಗಳನ್ನು ರಚಿಸಿದ್ದಾರೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ರಾಮಣ್ಣ ಬ್ಯಾಟಿಯವರು 2ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರೂ ಯಾವ ಪದವೀಧರರೂ ಮಾಡದ ಸಾಧನೆಯನ್ನು ಮಾಡಿದ್ದಾರೆ. ಇದನ್ನು ಅರಿತ ತಾಲೂಕು ಕಸಾಪದ ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿಗಳು, ಮುಳಗುಂದದ ಸಾಹಿತ್ಯಾಸಕ್ತರು ರಾಮಣ್ಣ ಬ್ಯಾಟಿಯವರನ್ನು ಸರ್ವಾನುಮತದಿಮದ ಆಯ್ಕೆ ಮಾಡಿದ್ದಾರೆ. ಇದು ಗದಗ ತಾಲೂಕಿನ ಸಾಹಿತಿಗಳಿಗೆ ಸಂತಸ ತಂದಿದೆ ಎಂದರು. ಆಹ್ವಾನ ಸ್ವೀಕರಿಸಿ ರಾಮಣ್ಣ ಬ್ಯಾಟಿ ಮಾತನಾಡಿ, ನನ್ನನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದರು. ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಶಶಿಕಾಂತ ಕೊರ್ಲಹಳ್ಳಿ, ಕವಿತಾ ದಂಡಿನ, ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡರ, ಶ್ರೀನಿವಾಸ ಉಮರ್ಜಿ. ಆರ್.ಜಿ. ಚಿಕ್ಕಮಠ, ಆರ್.ಎನ್. ಕಾಂಬಳೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

