ಗದಗ

ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ

Published On :

ಗದಗ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ನಡೆಸುವ ಡಿಪ್ಲೋಮಾ ಪರೀಕ್ಷೆಗಳನ್ನು ಗದಗ ಜಿಲ್ಲಾ ಕೇಂದ್ರದಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಗುರುವಾರ ನಗರದ ಮುಳಗುಂದ ನಾಕಾದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಮುಖಂಡ ಬಿ.ಜಿ. ಸಚ್ಚಿನ್, ಜಿಲ್ಲೆಯಲ್ಲಿರುವ 2 ನರ್ಸಿಂಗ್ ಕಾಲೇಜುಗಳಲ್ಲಿ 300 ಜನ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಜಿಎನ್‌ಎಂ ಪರೀಕ್ಷೆಗಳು ಈ ಹಿಂದೆ ಗದಗನಲ್ಲಿಯೇ ನಡೆಯುತ್ತಿದ್ದವು. ಆದರೆ, ಈಗ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯು ಜೂ. 3ರಿಂದ 7ರ ವರೆಗೆ ನಡೆಯಲಿರುವ ಪರೀಕ್ಷೆಗಳನ್ನು ಹುಬ್ಬಳ್ಳಿಯ ಕಾಲೇಜೊಂದರಲ್ಲಿ ನಡೆಸುವ ಬಗ್ಗೆ ಆದೇಶ ಮಾಡಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಕಾರಣ ಕೂಡಲೇ ಈ ಪರೀಕ್ಷೆಗಳನ್ನು ಗದಗ ನಗರದ ಕಾಲೇಜಿನಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಶಾಂತವ್ವ ತಳವಾರ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇದೇ ವೈದ್ಯಕೀಯ ಶಿಕ್ಷಣ ಇಲಾಖೆಯು ಅಡಿಯಲ್ಲಿ ಬರುವ ಪ್ಯಾರಾ ಮೆಡಿಕಲ್ ಬೋರ್ಡ್‌ನ ಪರೀಕ್ಷೆಗಳನ್ನು ಅರೇ ವೈದ್ಯಕೀಯ ಕೋರ್ಸ್‌ಗಳ ಪರೀಕ್ಷೆಗಳನ್ನು ನಗರದ ಸರ್ಕಾರಿ ಅನುದಾನಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ್ದರು. ಅದೇ ರೀತಿ ಈ ಬಾರಿಯೂ ಈ ಪರೀಕ್ಷೆಗಳನ್ನು ಗದಗ ನಗರದ ಕಾಲೇಜಿನಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿ ನಂದೀಶ್ ಕುಂಬ್ಳೆ ಮತ್ತಿತರರು ಮಾತನಾಡಿದರು.  
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ನಿಮ್ಮ ಈ ಸಮಸ್ಯೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಚರ್ಚಿಸಲಿದ್ದಾರೆ ಎಂದರು.
ಚೆನ್ನವ್ವ ಪಾಟೀಲ, ಫಾತಿಮಾ ನವಲಗುಂದ, ಅನಿಲ, ಶರಣವ್ವ, ಶಿವಯೋಗೆಪ್ಪ ಕಾತರಕಿ, ನಾಗವೇಣಿ ಕೊಟ್ನಿಕಲ್, ಲಲಿತಾ ಕೊನ್ನೂರ, ಅನ್ನಕ್ಕ ಕಡೆಮನಿ, ಭಾಗ್ಯಶ್ರೀ ಬುಕ್ಕಟಗಾರ, ದೀಪಾ ಕಳ್ಳಿಮನಿ, ದೀಪಕ್ ಶಲೂಡಿ, ಪಕೀರಸಾಬ ಗದುಗಿನ, ಸಂಗೀತಾ ಗಡೇದ, ರಾಕೇಶ ಗಾಯಕವಾಡ, ಗೀತಾ ಮಲ್ಲನಗೌಡ್ರ, ಮಹಾಂತೇಶ, ಜ್ಯೋತಿ ದಾನವೇ ಮತ್ತಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.