ನಾಡು ಮೆಚ್ಚುವ ಸಾಧನೆ ಮಾಡಿ: ತೋಂಟದ ಶ್ರೀ
ಗದಗ: ಎಲ್ಲ ವಿದ್ಯಾರ್ಥಿಗಳು ನಾಡು ಮೆಚ್ಚುವ ರೀತಿಯಲ್ಲಿ ಸಾಧನೆ ಮಾಡಬೇಕು ಐಎಎಸ್, ಐಪಿಎಸ್, ಐಎಫ್ಎಸ್ ಪರೀಕ್ಷೆಯಲ್ಲಿ ಕನ್ನಡದಲ್ಲೇ ಪಾಸಾಗಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಕರೆ ನೀಡಿದರು.
ಈಚೆಗೆ ಅವರು ಸ್ಥಳೀಯ ತೋಂಟದಾರ್ಯ ಮಠದಲ್ಲಿ ನಡೆದ 2120ನೇ ಶಿವಾನುಭವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94ರಷ್ಟು ಅಂಕ ಗಳಿಸಿದ ಸದಲಗಾದ ವಿದ್ಯಾರ್ಥಿನಿ ಶ್ರುತಿ ಸರ್ವಡೆಯನ್ನು ಸತ್ಕರಿಸಿ ಆಶೀರ್ವಚನ ನೀಡಿದರು. ಕನ್ನಡದ ಬಗ್ಗೆ ಕೀಳರಿಮೆ ತಾಳದೆ ಮಾತೃ ಭಾಷೆಯ ಮೇಲಿನ ಅಕ್ಕರೆ ಉಳಿಸಿಕೊಂಡೇ ಆಂಗ್ಲ ಭಾಷಾ ಜ್ಞಾನ ಸಾಧನೆಗೆ ಯುವ ಜನಾಂಗ ಮುಂದಾಗಬೇಕು. ಕನ್ನಡ ರಂಗಕಲೆಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾದದ್ದು, ಶಾಂತಕವಿ ಮರಾಠಿ ನಾಟಕ ಯುಗದಲ್ಲಿ ಕನ್ನಡ ನಾಟಕಗಳನ್ನು ರಚಿಸಿದರು. ರಕ್ಷಿಸು ನಾಡದೇವಿ ಕರ್ನಾಟಕವನ್ನು ಎಂಬ ಗೀತೆಯು ಆ ಕಾಲದಲ್ಲಿ ಜನರನ್ನು ಹುರಿದುಂಬಿಸಿತ್ತು. ಎಚ್.ಡಿ. ಮಹಾಂತೇಶ ಶಾಸ್ತ್ರಿಗಳು 100 ನಾಟಕಗಳನ್ನು ಬರೆದರು. ಎಚ್.ಎನ್. ಹೂಗಾರ ಹಲವು ನಾಟಕಗಳನ್ನು ರಚಿಸಿದರು. ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳ ಹಾನಗಲ್ಲ ಕುಮಾರೇಶ ನಾಟಕ ಸಂಘವನ್ನು ಕಟ್ಟಿ ನಾಡೆಲ್ಲ ಸುತ್ತಿದ್ದರು. ಇವರಿಗೆ ಆಶ್ರಯ ನೀಡಿದವರು ಬಸರಿಗಿಡದ ವೀರಪ್ಪನವರು ಇವರ ಹೇಮರಡ್ಡಿ ಮಲ್ಲಮ್ಮ ನಾಟಕ ಗಿನ್ನಿಸ್ ದಾಖಲೆ ರೂಪ ಪಡೆಯಿತು. ನಂತರ ಹುಯಿಲಗೋಳ ನಾರಾಯಣರಾವ್, ಗರುಡ ಸದಾಶಿವರಾಯರು, ನಾರಾಯಣರಾವ್, ಶಿರಹಟ್ಟಿ ವೆಂಕೊಬರಾಯ್, ಹಂದಿಗನೂರ ಸಿದ್ಧರಾಮಪ್ಪನವರು. ಗುಡಗೇರಿಯ ಎನ್.ಬಸವರಾಜ, ಏಣಿಗೆ ಬಾಳಪ್ಪ ಇವರೆಲ್ಲರೂ ರಂಗಕಲೆಯ ಜೀವಂತ ದೇವರಾಗಿ ಉಳಿದರು. ಜೋಳದರಾಶಿ ದೊಡ್ಡನಗೌಡರು ನಾಟಕಗಳನ್ನು ರಚಿಸಿ ಆಡುತ್ತಿದ್ದರು. ಇವರು ಲಂಡನ್ನಲ್ಲಿ ನಾಟಕ ಆಡಿದ್ದೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಗುಬ್ಬಿ ಕಂಪನಿಯ ಕುರುಕ್ಷೇತ್ರ, ಲವಕುಶ ನಾಟಕಗಳು ನನಗೆ ಇನ್ನು ನೆನಪಾಗುತ್ತವೆ. ಅಷ್ಟು ಸುಂದರ ಅಭಿನಯ ಮೂಲಕ ಸಮಾಜಕ್ಕೆ ಕನ್ನಡ ನಾಡಿಗೆಗೆ ಅವರು ಸಂದೇಶ ನೀಡುತ್ತಿದ್ದರು ಎಂದರು. ರೋಣದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಸಿ.ಎಂ. ವಡಗೇರಿ ಕನ್ನಡ ಸಾಹಿತ್ಯಕ್ಕೆ ರಂಗಕಲೆಯ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಸಂಗಮೇಶ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿವಾಲೀಲಾ ಅಂಗಡಿ ಮತ್ತು ಮಂಜುಳಾ ಅಂಗಡಿ ಧರ್ಮಗ್ರಂಥ ಪಠಿಸಿದರು. ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಗೌರವ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಶಿವಾನುಭವ ಸಮಿತಿ ಚೇರಮನ ಪ್ರೊ. ಎಸ್.ಎನ್. ಆದಿ ಇದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ ಸ್ವಾಗತಿಸಿದರು. ಶಂಕ್ರಪ್ಪ ಅಂಗಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

