ಗಜೇಂದ್ರಗಡ: ಹೊಲಗಳತ್ತ ಮುಖ ಮಾಡಿದ ರೈತ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 30
ಪಟ್ಟಣ ಸೇರಿದಂತೆ ಸುತ್ತ್ತಲಿನ ಗ್ರಾಮಗಳಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಮುಂದಾಗುತ್ತಿದ್ದಾರೆ.
ಮಳೆಯ ನಿರೀಕ್ಷೆಯಿಂದ ಹೊಲಗಳಲ್ಲಿನ ಕಸ, ಕಡ್ಡಿಗಳನ್ನು ತೆಗೆದು ಹದಗೊಳಿಸಿ ಬಿತ್ತನೆಗೆ ಸಿದ್ಧಪಡಿಸಿದ್ದ ರೈತರು ಎರಡು ದಿನದಿಂದ ಮಳೆ ಸುರಿದಿದ್ದರಿಂದ ಚಕ್ಕಡಿಯೊಂದಿಗೆ ಬೀಜ, ಗೊಬ್ಬರ ಸಹಿತ ಹೊಲಗಳತ್ತ ಮುಖ ಮಾಡಿದ್ದಾರೆ.
ಬಿತ್ತನೆಗೆ ಸೂಕ್ತವಾದ ರೋಹಿಣಿ ಮಳೆ ಆಗಿರುವುದು ರೈತರಲ್ಲಿ ಹರ್ಷ ಮೂಡಿದೆ. ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರಿಡ್ ಜೋಳ, ಗುರೆಳ್ಳು, ಯಳ್ಳು, ತೊಗರಿ ಬೀಜಗಳನ್ನು ತಂದು ಬಿತ್ತುವ ಬಟ್ಟಲಿನ ಮುಖಾಂತರ ಕರಿಯತ್ತ ಕಾಳಿಂಗ, ಬಿಳಿಯತ್ತ ಮಾಲಿಂಗ ಎಂದು ಹುರಿದುಂಬಿಸುವ ಜನಪದ ಗೀತೆ ಹಾಡುತ್ತಾ ಉಲ್ಲಾಸಭರಿತರಾಗಿ ಬಿತ್ತನೆಯಲ್ಲಿ ಮಘ್ನರಾಗಿದ್ದಾರೆ.
ಸದಾ ಬರಗಾಲದಿಂದ ಕಷ್ಟ ಅನುಭವಿಸಿದ್ದ ರೈತರು ಗೋವಾ, ಕಾರವಾರ ಮತ್ತಿತರ ಕಡೆ ಉದ್ಯೋಗ ಅರಸಿ ಗುಳೆ ಹೋಗಿದ್ದರು. ಈಗ ಸುರಿದ ಉತ್ತಮ ಮುಂಗಾರು ಮಳೆಯಿಂದಾಗಿ ಗುಳೆ ಹೋದವರೆಲ್ಲ ಸ್ವ-ಗ್ರಾಮದತ್ತ ತೆರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೋಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ಗ್ರಾಮಗಳಲ್ಲಿ ರೈತರು ಬಿತ್ತನೆಯಲ್ಲಿ ನಿರತರಾಗಿದ್ದಾರೆ. ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ಕಪ್ಪು ಮಿಶ್ರಿತ ಎರೆ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಕಾರ್ಯಕ್ಕೆ ಮತ್ತೊಂದು ಮಳೆ ಆಗಮಿಸುವುದನ್ನು ಕಾಯುತ್ತಿದ್ದಾರೆ.
ರಿಯಾಯಿತಿ ದರದಲ್ಲಿ ಬೀಜ ವಿತರಣೆ: ಮುಂಗಾರು ಮಳೆ ಸಕಾಲಕ್ಕೆ ಆರಂಭಗೊಳ್ಳುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ದೊರೆತ ಮಾಹಿತಿ ಪ್ರಕಾರ ಈ ಬಾರಿ ತಾಲೂಕಿನಾದ್ಯಂತ 70 ಸಾವಿರ ಹೇಕ್ಟರ್ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿದೆ. ಈಗಾಗಲೇ ಸರ್ಕಾರದಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ನೀಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ವಿ.ಟಿ. ವಿರಕ್ತಮಠ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

