ಸಾಮೂಹಿಕ ವಿವಾಹ ಬಡವರ ಸಂಜೀವಿನಿ
ಕನ್ನಡಪ್ರಭ ವಾರ್ತೆ, ರೋಣ, ಮೇ 30
ಜೀವನ ನಡೆಸುವುದೇ ಕಷ್ಟಕರವಾದ ಇಂದಿನ ದಿನಗಳಲ್ಲಿ ಮದುವೆ ಎಂಬುದು ಅದರಲ್ಲೂ ಹೆಣ್ಣು ಹೆತ್ತ ತಂದೆ, ತಾಯಂದಿರಿಗೆ ನೀಗಲಾರದ ನೋವು. ಇಂತಹ ಸಂದರ್ಭದಲ್ಲಿ ಹೃದಯ ಶ್ರೀಮಂತಿಕೆಯುಳ್ಳ ಅಂಕಲಿ ಮಠದ ಶ್ರೀಗಳು ಅಖಂಡ ಧಾರವಾಡ ಜಿಲ್ಲೆ, ಅದು ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಸಾಮೂಹಿಕ ವಿವಾಹ ಕಾರ್ಯ ಮಾಡಿದ್ದು, ಅದು ಬಡವರ ಬಾಳಿಗೆ ಸಂಜೀವಿನಿ ಇದ್ದಂತೆ ಎಂದು ಶಾಸಕ ಜಿ.ಎಸ್.ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಬುಧವಾರ ತಾಲೂಕಿನ ಕೊತಬಾಳ ಗ್ರಾಮದ ಅಡವಿ ಶಿದ್ದೇಶ್ವರರ 58ನೇ, ರಾಜಶೇಖರ ಶ್ರೀಗಳ 12 ನೇ ಪುಣ್ಯಾರಾಧನೆಯ ಅಂಗವಾಗಿ ಕೈಗೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಸಾಮೂಹಿಕ ವಿವಾಹದ ಹರಿಕಾರರೆಂದೆ ಪ್ರಸಿದ್ಧರಾದ ರಾಜಶೇಖರ ಶ್ರೀಗಳು 1980ರಿಂದ ಸಾಮೂಹಿಕ ವಿವಾಹಗಳನ್ನು ಕೈಗೊಂಡು, ಬಡವರ ಬಾಳಿಗೆ ಆಶಾಕಿರಣವಾಗಿದ್ದಾರೆ. ಅವಿರತವಾಗಿ 33 ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ಸಾಮೂಹಿಕ ವಿವಾಹಗಳನ್ನು ಮಾಡುತ್ತಿರುವದು ಶ್ರೀಗಳ ಕಾರ್ಯಕ್ರಮ ಮಹತ್ತರವಾದದ್ದು ಎಂದರು.
ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಮತ್ತೊಮ್ಮೆ ತಮ್ಮ ಸೇವೆ ಮಾಡಲು ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದ, ನಾನು ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಿಕೊಂಡು ನೀವು ತೋರಿಸಿದ ಪ್ರೀತಿಗೆ ಚ್ಯುತಿ ಬಾರದಂತೆ ನಡೆದುಕೊಂಡು ಸರ್ಕಾರದ ವಿವಿಧ ಯೋಜನೆಗಳನ್ನು ತಂದು ರೋಣ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯ ಕ್ಷೇತ್ರವನ್ನಾಗಿಸುವೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ತಾಪಂನ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ, ದಾಂಪತ್ಯ ಜೀವಕ್ಕೆ ಕಾಲಿಡುತ್ತಿರುವ, ಸತಿ-ಪತಿಗಳು ಜೀವನದಲ್ಲಿ ಬರುವ ಕಷ್ಟ, ಸುಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು. ಜತೆಗೆ ಸಾಮರಸ್ಯದಿಂದ ಬದುಕಬೇಕು ಎಂದರು.
ಜಿಪಂನ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಸಾನ್ನಿಧ್ಯ ವಹಿಸಿದ್ದ ಕರಿಬಸವ ಶ್ರೀಗಳು, ಸಿದ್ದಲಿಂಗ ಶ್ರೀಗಳು, ಬೆನಹಾಳದ ಸದಾಶಿವ ಶ್ರೀಗಳು ಮಾತನಾಡಿದರು.
ಗುಡದೂರಿನ ನೀಲಕಂಠಯ್ಯ ತಾತನವರು, ಶಿದ್ದೇಶ್ವರ ಶ್ರೀಗಳು, ಎಸ್.ಎಂ. ಪಾಟೀಲ, ರಾಜೇಶ ಪತ್ತಾರ, ಬಸಯ್ಯ ಶಾಸ್ತ್ರಿಗಳು, ಉಪನ್ಯಾಸಕ ವಿ.ಕೆ.ಪಾಟೀಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಗಂಗಾಧರ ಶ್ರೀಗಳ ತುಲಾಭಾರ ಜರುಗಿತು. ಮುತ್ತಣ್ಣ ಹಡಗಲಿ ಸ್ವಾಗತಿಸಿದರು. ಬಸವರಾಜ ಪಾಗದ ನಿರೂಪಿಸಿದರು. ವೀರಣ್ಣ ಯಾಳಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

