ಗದಗ

ಶಾಲೆಗಳತ್ತ ಮುಖ ಮಾಡಿದ ಚಿಣ್ಣರು

Published On :

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಗುರುವಾರದಿಂದ ಅಧಿಕೃತವಾಗಿ ಆರಂಭವಾದ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ಹಾಜರಾತಿ ನೀಡಿದರು.
ಮೇ 31 ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದು, ಕಳೆದೊಂದು ತಿಂಗಳಿಂದ ಯಾವುದೇ ಸದ್ದು ಗದ್ದಲವಿಲ್ಲದೆ ಬಣಗುಡುತ್ತಿದ್ದ ಶಾಲೆಗಳಲ್ಲಿ ಢಣ, ಢಣ ಗಂಟೆಯ ನಾದಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು. ರಜೆಯ ಮಜಾ ಗುಂಗಿನಲ್ಲಿದ್ದ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದರು. ಸರ್ಕಾರ ಶಾಲೆಗಳಲ್ಲಿ ಪ್ರಾರಂಭದ ದಿನದಿಂದಲೇ ವಿದ್ಯಾರ್ಥಿಗಳ ಪೂರ್ಣ ಹಾಜರಾತಿಯೊಂದಿಗೆ ಚಟುವಟಿಕೆ ಪ್ರಾರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಮಕ್ಕಳನ್ನು ಶಾಲೆಯಡೆಗೆ ಆಕರ್ಷಿಸಲು ಶಿಕ್ಷಕರು ಹೆಣಗಾಡಬೇಕಾಗಿದೆ.
ರಜೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಆಟವಾಡುತ್ತಾ ರಾತ್ರಿ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದ ಮಕ್ಕಳಿಗೆ ಈಗ ಪಾಲಕರ ಹಾಗೂ ಶಿಕ್ಷಕರ ಬಲವಂತ, ಇಲ್ಲವೆ ಸ್ವಇಚ್ಚೆಯಿಂದ ಶಾಲೆಗೆ ಹೋಗಲೇಬೇಕಿದೆ. ಎಲ್ಲ ಶಾಲೆಗಳಿಗೆ ಈಗಾಗಲೇ ಬಟ್ಟೆ, ಪುಸ್ತಕ ಇತ್ಯಾದಿ ಪೂರೈಸಲಾಗಿದೆ. ಜತೆಗೆ ಮಕ್ಕಳನ್ನು ಶಾಲೆಗೆ ಕರೆತರುವಂತೆ ಶಿಕ್ಷಕರಿಗೂ ಆದೇಶಿಸಲಾಗಿದೆ. ಪ್ರತಿ ಶಾಲೆಯಲ್ಲಿಯೂ ಎಸ್‌ಡಿಎಂಸಿ ಸಹಕಾರದಿಂದ ಶಾಲಾ ಪ್ರಾರಂಭೋತ್ಸವ ತಯಾರಿ ನಡೆದಿದೆ. ವಿದ್ಯಾವಿಕಾಸ ಯೋಜನೆ ಅಡಿ ಮಕ್ಕಳಿಗೆ ಮೊದಲು ದಿನವೇ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಣೆ ಜತೆಗೆ ಎಲ್ಲ ಶಾಲೆಗಳಲ್ಲಿಯೂ ಬಿಸಿಯೂಟ ಸಿದ್ಧತೆಯು ನಡೆಯಬೇಕಿದೆ. ಶಾಲೆ ಪ್ರಾರಂಭಕ್ಕೆ ಮುನ್ನವೇ ಶಾಲೆ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಮೊದಲ ದಿನದಿಂದಲೇ ಶೇ. 100ರಷ್ಟು ಹಾಜರಾತಿ ದಾಖಲಿಸುವಂತೆ ಇಲಾಖೆ ಸೂಚನೆ ಪಾಲಿಸಲು ಶಿಕ್ಷಕರು ಬೇವರು ಸುರಿಸುತ್ತಿದ್ದಾರೆ. ಶಾಲೆಗೆ ಬರುವ ಮಗುವಿಗೆ ಪ್ರೀತಿ ಮತ್ತು ಗೌರವದ ಭಾವನೆ ಬೆಳೆಯಲು ಪೂರಕವಾಗಿ ಉತ್ತಮ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ಶಿಕ್ಷಕರು ಮುಂದಾಗಿದ್ದಾರೆ. ಅಲ್ಲದೆ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಇಲಾಖೆಯ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಕ್ರೀಡಾಕೂಟಗಳು, ಗಾಳಿಪಟ ಸ್ಪರ್ಧೆ, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎನ್ನುವ ಸೂಚನೆ ಜಾರಿಗೆ ಬರಬೇಕಾಗಿದೆ. ಪ್ರಾಥಮಿಕ ಶಾಲೆಯ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಜಾರಿಗೊಳಿಸಿದ ಪರಿಹಾರ ಬೋಧನೆ ಕಾರ್ಯಕ್ರಮ ಚಾಲನೆಗೆ ತರಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ ಎಂಬುದು ಪಾಲಕರ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.