ಬಿಜೆಪಿ ಎಂದಿಗೂ ದಲಿತವಿರೋಧಿಯಲ್ಲ: ರಮೇಶ
ನರೇಗಲ್ಲ: ಬಿಜೆಪಿ ದಲಿತ ವಿರೋಧಿಯಲ್ಲ, ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಪಕ್ಷದ ಚೌಕಟ್ಟಿನೊಳಗೆ ಬಗೆ ಹರಿಸಿಕೊಳುವುದು ಸೂಕ್ತ ಎಂದು ಗದಗ ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಹೇಳಿದರು. ಸಮೀಪದ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದರು. ದಲಿತ ಮುಖಂಡನಾದ ನಾನು ಬಿಜೆಪಿಯಿಂದ ಜಿಪಂ ಆಯ್ಕೆಗೊಂಡಿಲ್ಲವೇ? ನನಗೆ ಉಪಾಧ್ಯಕ್ಷ ಸ್ಥಾನ ನೀಡಿದ್ದು, ಬಿಜೆಪಿಯೇ ಹೊರತು ಬೇರೆ ಪಕ್ಷವಲ್ಲ. ಬಿಜೆಪಿ ಎಲ್ಲರನ್ನು ಸಮಾನರನ್ನಾಗಿ ಕಾಣುತ್ತದೆ. ಯಾರಲ್ಲೂ ಬೇಧ-ಭಾವ ಎಣಿಸುವುದಿಲ್ಲ ಎಂದರು.ಭೇದ-ಭಾವ ಪಕ್ಷದಲ್ಲಿ ಕಾರ್ಯ ನಿರ್ವಹಿಸುವವರ ಮಧ್ಯದಲ್ಲಿ ತಲೆದೂರಬಹುದು. ಅಂತಹ ಭಿನ್ನತೆಗಳನ್ನು ಪಕ್ಷ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳುವುದು ಸೂಕ್ತ. ಅಂತವುಗಳಿಗೆ ಪಕ್ಷದ ಹೆಸರು ಬಳಕೆ ಮಾಡಿ, ಪಕ್ಷದ ವರ್ಚಸ್ಸಿಗೆ ಚ್ಯುತಿ ತರುವಂತಾಗಬಾರದು. ಯಾರೇ ಆಗಲಿ ಆವೇಶದಲ್ಲಿ ಆ ರೀತಿ ಮಾತನಾಡಿರಬಹುದು, ಆದರೆ ಅಂತಹ ಮಾತಿಗೆ ಯಾರೂ ಕಿವಿಗೊಡಬಾರದು. ಪಕ್ಷದ ಪ್ರಮುಖರು ನಮಗೆಲ್ಲರಿಗೂ ಸಮಾನತೆಯಿಂದ ಸಹಕರಿಸುತ್ತಾ ಬಂದಿದ್ದಾರೆ. ಬಿಜೆಪಿಯಲ್ಲಿ ಯಾವುದೇ ರೀತಿ ತಾರತಮ್ಯವಿಲ್ಲ ಅದಕ್ಕೆ ಸಾರ್ವಜನಿಕರು ಕಿವಿಗೊಡಬಾರದು ಎಂದರು.
ರಾಮಾಯಣ ಮೌಲ್ಯಗಳ ಪ್ರತಿಪಾದಿಸುವ ಕಾವ್ಯ
ಗದಗ: ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯ ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮಹಾಕಾವ್ಯವಾಗಿದೆ ಎಂದು ಜ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು. ಇತ್ತೀಚಿಗೆ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದ 2143ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆದಿ ಕವಿ ವಾಲ್ಮೀಕಿ ಮಹರ್ಷಿ ಜಯಂತಿ ನಿಮಿತ್ತ 'ರಾಮಾಯಣ ಒಂದು ಅವಲೋಕನ' ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉಪನ್ಯಾಸ ನೀಡಿದ ಬದಾಮಿ ವೀರಪುಲಕೇಶಿ ಡಾ. ಪಾರ್ವತಿ ಲೆಂಕೆಣ್ಣವರ ಮಾತನಾಡಿ, ರಾಮಾಯಣದ ತತ್ವಾದರ್ಶಗಳು ಪ್ರಸ್ತುತ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳು ಮಾರ್ಮಿಕವಾಗಿವೆ. ಇಂದಿನ ಯುಗದ ಜೀವನಕ್ಕೂ ಮಾರ್ಗದರ್ಶನ ಮಾಡಬಲ್ಲ ಹಾಗೂ ಪ್ರಸ್ತುತ ನೀತಿಯನ್ನು ಬೋಧಿಸಬಲ್ಲ ತತ್ವಾದರ್ಶಗಳನ್ನು ಹೊಂದಿದೆ ಎಂದರು. ಆರೋಗ್ಯವೇ ಭಾಗ್ಯ ಕುರಿತು ಬೆಂಗಳೂರಿನ ವೈದ್ಯೆ ಡಾ.ನಂದಾ ರಜನೀಶ ಉಪನ್ಯಾಸ ನೀಡಿದರು. ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಜಿ.ಪಿ. ಕಟ್ಟಿಮನಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಮುಂತಾದವರು ಪಾಲ್ಗೊಂಡಿದ್ದರು.
ಪದವೀಧರ ಕ್ಷೇತ್ರ:ನೋಂದಣಿ ಅವಧಿ ವಿಸ್ತರಣೆ
ಗದಗ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರಾಗಿ ಹೆಸರು ನೋಂದಾಯಿಸಲು ಅರ್ಹ ಪದವೀಧರರಿಗೆ ನ. 15ರ ವರೆಗೆ ಅವಕಾಶ ವಿಸ್ತರಿಸಲಾಗಿದೆ. ಈಗಾಗಲೇ ಅಕ್ಟೋಬರ್ 1ರಂದು ಸಿದ್ದವಿರುವ ಮತದಾರರ ಕರಡು ಪ್ರತಿಯನ್ನು ಪರಿಶೀಲನೆಗಾಗಿ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 2010ರ ಅಕ್ಟೋಬರ್ 31ರ ಪೂರ್ವದಲ್ಲಿ ಪದವಿ ಪಡೆದಿರುವ ಅರ್ಹರು ಪಟ್ಟಿಯಲ್ಲಿ ಹೆಸರು ಸೇರಿಸಲು ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ನಮೂನೆ 18ನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಡಲು 8, ಮತಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಗಾವಣೆಗೆ 8-ಎ ನಮೂನೆಗಳಲ್ಲಿ ಸಲ್ಲಿಸಬೇಕು ಎಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ನೋಂದಣಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯೋತ್ಸವ ಆಚರಣೆ
ನರಗುಂದ: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 58ನೇ ಕರ್ನಾಟಕ ರಾಜೋತ್ಸವನ್ನು ಅದ್ಧೂರಿಯಾಗಿ ಆಚರಸಲಾಯಿತು. ಶಾಲೆಯ ಪ್ರಾಚಾರ್ಯ ಎಂ.ಕೆ. ಅಲ್ಲಿಭಾಯಿ ಮಾತನಾಡಿ, ರಾಜ್ಯದ ಕೆಲವು ಭಾಗಗಲ್ಲಿ ಕನ್ನಡ ಭಾಷೆ ಮಾಯವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ನಮ್ಮ ಭಾಷೆ, ನೆಲ, ಜಲ, ಉಳಿಸಿ, ಬೆಳಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ನಿಂಗಪ್ಪ ಸರಪ್ಪನವರ, ಸುರೇಶ ಸೂಡಿ, ಶ್ರೀಗುರು ಐಹೊಳ್ಳಿ ಮುಂತಾದವರಿದ್ದರು.
ನಾಳೆ ಉಚಿತ ಕ್ಷೌರ
ಮುಂಡರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಶಿವು ಲಕ್ಕಿಮೆನ್ಸ್ ಪಾರ್ಲರ್, ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಾಜ ಗದಗ ಹಾಗೂ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ. 5ರಂದು ಬೆಳಗ್ಗೆ 9.30ರಿಂದ ಸಂಜೆ 4.50ರ ವರೆಗೆ ಅಂಗವಿಕಲರ ಹಾಗೂ ವಿಕಲಚೇತನ ಮಕ್ಕಳಿಗೆ ಉಚಿತ ಕ್ಷೌರ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು, ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಬಸವರಾಜ ದೊಡ್ಡಮನಿ, ಮೋಹನ್ ಚಂದಪ್ಪನವರ, ವಿರೂಪಾಕ್ಷಪ್ಪ ಕೊಣ್ಣೂರ, ಎಂ.ಎನ್. ಬೆಳಗಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಘಟಕ ದೇವು ಹಡಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

