ಜನಪದ ಸಾಹಿತ್ಯ ಅಳಿವಿನಂಚಿಗೆ: ಶಿವಪ್ಪ ವಿಷಾದ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 6
ಜನಪದ ನಮ್ಮ ಪರಂಪರೆಯ ಮೂಲ ಬೇರು. ಇದನ್ನು ಬೆಳೆಸುವ ಭಾವನೆ ಎಲ್ಲರಲ್ಲಿಯೂ ಬೇಕು. ಇದನ್ನು ನಾವೆಲ್ಲ ಇಂದು ಮರೆಯುತ್ತಿರುವುದರಿಂದ ಜನಪದ ಅಳಿವಿನಂಚಿನಲ್ಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶಿವಪ್ಪ ಕುರಿ ವಿಷಾದಿಸಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ವಿದ್ಯಾನಗರದ ಅಮರೇಶ್ವರ ನಿಲಯದಲ್ಲಿ ತಾಲೂಕ ಕಸಾಪ, ತಾಲೂಕು ಘಟಕದ ವಿವೇಕ ಜಾಗೃತ ಬಳಗ ಇವರ ಆಶ್ರಯದಲ್ಲಿ ರಾಜ್ಯೋತ್ಸವದ ಸಂಭ್ರಮ ಮಾಸಾಚರಣೆಯ ನಿಮಿತ್ತ ನಡೆದ ಉಪನ್ಯಾಸ ಮಾಲಿಕೆಯ ಪ್ರಥಮ ಕುಸುಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಒತ್ತು ನೀಡುವ ಸಾಹಿತ್ಯ ಇಂದು ಅಗತ್ಯವಾಗಿದೆ. ಸಾಹಿತ್ಯ ಜೀವನದ ಅನುಭವದ ಮೌಲ್ಯಗಳನ್ನು ಬಿಂಬಿಸುತ್ತಿದೆ. ಜನ ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವುದು ಉತ್ತಮ ಕಾರ್ಯ. ಸ್ವಚ್ಛಂದ ವಾತಾವರಣವನ್ನು ಸಾಹಿತ್ಯ ಮೂಡಿಸುತ್ತಿದ್ದು, ಸಾಹಿತ್ಯ ಚಟುವಟಿಕೆ ನಿರಂತರ ಬೆಳಕು ಬೀರಬೇಕು. ಸಾಹಿತ್ಯ ನಮ್ಮ ನಾಡಿನ ಮಹತ್ವದ ಸಂಕೇತಗಳಲ್ಲಿ ಒಂದು. ಅದನ್ನು ಜೋಪಾನವಾಗಿ ಕಾಪಾಡಬೇಕಾಗಿದೆ.
ಇಂದು ಜನರಲ್ಲಿ ಕುಟ್ಟುವ, ಬೀಸುವ ಶ್ರಮ ಕಡಿಮೆಯಾಗಿದೆ. ಜಾನಪದ ಕಲೆಗಳಾದ ಸೋಬಾನ ಪದ, ಲಾವಣಿ, ಗರತಿಯ ಹಾಡು, ಒಡಪು-ಒಗಟುಗಳು, ಭಜನೆ ಪದಗಳು ಹಾಗೂ ಜಾನಪದ ಆಚರಣೆಯಲ್ಲಿರುವ ಗೀತೆಗಳನ್ನು ಹಾಡುವ ವ್ಯವಸ್ಥೆ ಕಡಿಮೆಯಾಗಿದೆ. ಪಂಚತತ್ವಗಳ ಆಧಾರಿತ ಕೆಲಸವನ್ನು, ಸಂಸ್ಕೃತಿ ಪರಂಪರೆಯನ್ನು ಕಾಯ್ದುಕೊಂಡು ಹೋಗುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಎನ್.ಆರ್. ಕುಲಕರ್ಣಿ ಕನ್ನಡ ಸಾಂಸ್ಕೃತಿಕ ಪರಂಪರೆಗೆ ತಾಲೂಕಿನ ಮಠಮಾನ್ಯಗಳ ಕೊಡುಗೆ ಕುರಿತು ಉಪನ್ಯಾಸ ನೀಡಿ, ಸಾಂಸ್ಕೃತಿಕ ರಾಯಭಾರಿಗಳಾಗಿ ಮಠಮಾನ್ಯಗಳು ಕೆಲಸ ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ಪಟ್ಟಣದ ಜ. ಫಕೀರೇಶ್ವರ ಸಂಸ್ಥಾನ ಮಠದ ಸಿದ್ದರಾಮ ಶ್ರೀಗಳು ಭಾವೈಕ್ಯತೆ ಬಗ್ಗೆ ನಾಡಿನಾದ್ಯಂತ ಜಾಗೃತಿ ಮೂಡಿಸಿದ್ದಾರೆ. ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಡೆಗೆ ರಾಜಕಾರಣಿ ಮತ್ತು ಧರ್ಮ ಗುರುಗಳನ್ನು ಲೆಕ್ಕಿಸದೇ ವೇದಿಕೆ ಮುಖಾಂತರ ಖಂಡಿಸಿದ್ದಾರೆ. ಹೆಬ್ಬಾಳ ಹಾಲಸ್ವಾಮಿ ಮಠ, ಬೆಳ್ಳಟ್ಟಿ ರಾಮಲಿಂಗೇಶ್ವರ ಮಠ, ಬನ್ನಿಕೊಪ್ಪದ ಬೃಹನ್ಮಠ, ವರವಿಯ ಮೌನೇಶ್ವರ ಮಠದ, ತಾರಿಕೊಪ್ಪದ ಗವಿಮಠದ ಶ್ರೀಗಳು ಸಮಾಜಮುಖಿಯಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಶ್ರೀಗಳ ವೈಚಾರಿಕತೆಯ ಮನೋಭಾವದ ಗಟ್ಟಿ ನಿಲುವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಜಯದತ್ತ ಮಂಗಸೂಳಿ, ಐ.ಸಿ.ನೂರಶೆಟ್ಟರ, ಕೆ.ಎಫ್. ರಮಜಾನವರ, ಬಿ.ಸಿ. ಮೇಟಿ, ಲಲಿತಾ ಕಲ್ಲಪ್ಪನವರ, ಸರೋಜಾ ಕಟ್ಟಿಮನಿ, ಶೀಲಾ ಪಾಟೀಲ, ಎಫ್.ಎಸ್.ಅಕ್ಕಿ, ಎಂ.ಕೆ. ಲಮಾಣಿ, ಬಿ.ಎಸ್. ಸಂಗಪ್ಪಶೆಟ್ಟರ, ಎಸ್.ಬಿ. ಹೊಸೂರ, ಎಂ.ಪಿ. ಕಾಳಗಿ, ಜಿ.ಆರ್. ಸರ್ಜಾಪುರ, ಮೃತ್ಯುಂಜಯ ಕಪ್ಪತ್ತನವರ, ಎಂ.ಎಸ್. ಗೋದಿ, ಪ್ರಕಾಶ ಮಾಬಳಿ ಮುಂತಾದವರು ಉಪಸ್ಥಿತರಿದ್ದರು. ಸಿ.ಪಿ. ಕಾಳಗಿ ಸ್ವಾಗತಿಸಿದರು. ಗಿರೀಶ ಕೋಡಬಾಳ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

