ಖೋಟಾ ನೋಟು: ತತ್ತರಿಸಿದ ಜನ
ಲಕ್ಷ್ಮೇಶ್ವರ: ಒಂದು ದೇಶದ ಆರ್ಥಿಕ ವ್ಯವಸ್ಥೆ ನೋಡಿ ಆ ದೇಶದ ಬೆಳವಣಿಗೆ ಅಳೆಯಲಾಗುತ್ತದೆ. ಆದರೆ, ಇಂತಹ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕಾರ್ಯವನ್ನು ಖೋಟಾ ನೋಟು ತಯಾರಿಸುವ ಜಾಲ ಎಗ್ಗಿಲ್ಲದೇ ಮಾಡುತ್ತಿದೆ.
ಇದನ್ನು ನಮ್ಮ ದೇಶದ ಗಡಿಗೆ ಹೊಂದಿಕೊಂಡಿರುವ ಪಾಕಿಸ್ಥಾನ ಮಾಡುತ್ತಿದೆ ಎನ್ನಲಾಗುತ್ತಿದೆ. ಆದರೆ, ಈ ಜಾಲವು ರಾಜ್ಯದ ಸಣ್ಣ ಮತ್ತು ದೊಡ್ಡ ನಗರ ಹಾಗೂ ಪಟ್ಟಣಗಳನ್ನು ಬಿಡದಿರುವುದು ಅಚ್ಚರಿಯಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಖೋಟಾ ನೋಟಿನ ಹಾವಳಿ ಕಂಡುಬರುತ್ತಿದ್ದು, ಇಲ್ಲಿನ ವ್ಯಾಪಾರಸ್ಥರನ್ನು ಹಾಗೂ ಸಾರ್ವಜನಿಕರನ್ನು ನಿದ್ದೆಗೆಡಿಸಿದೆ. ಈಚೆಗೆ ನಡೆದ ದೊಡ್ಡ ಹಬ್ಬವಾದ ದೀಪಾವಳಿಯಲ್ಲಿ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿರುವ ಸಂದರ್ಭ ಉಪಯೋಗಿಸಿಕೊಂಡು ಗದ್ದಲದಲ್ಲಿ ಖೋಟಾ ನೋಟು ಚಲಾವಣೆ ಮಾಡಲಾಗಿದೆ. ಹಬ್ಬ ಹರಿದಿನಗಳಲ್ಲಿ ಜೋರಾಗಿ ವ್ಯಾಪಾರ ಮಾಡುವಾಗ ರು. 50, 100 ಹಾಗೂ 500 ಮುಖ ಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿ ಜನರನ್ನು ಮೋಸಗೊಳಿಸುತ್ತಿರುವುದು ಪಟ್ಟಣದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ರು. 50, 100, 500 ನೋಟನ್ನು ನೀಡಲು ಹೋದರೆ ಯಾವುದು ಅಸಲಿ, ಯಾವುದು ನಕಲಿ ಎಂಬುದು ತಿಳಿಯದೆ ಮುಖ ಮುಖ ನೋಡುವ ಪರಸ್ಥಿತಿ ಬಂದೊದಗಿದೆ.
ಎಲ್ಲಲ್ಲಿ ಚಲಾವಣೆ: ಪಟ್ಟಣದ ಬಾರ್ಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಹೊಟೇಲ್ಗಳಲ್ಲಿ, ದಾಬಾಗಳಲ್ಲಿ, ತರಕಾರಿ ಅಂಗಡಿ ಮುಂಗಟ್ಟುಗಳಲ್ಲಿ ಇಂತಹ ಖೋಟಾ ನೋಟನ್ನು ಚಲಾವಣೆ ಮಾಡಿ, ವ್ಯಾಪಾರ ಮಾಡಿ ಅಂಗಡಿ ಮಾಲೀಕರಿಗೆ ಟೋಪಿ ಹಾಕುವ ಕಾರ್ಯ ನಡೆಯುತ್ತಿದೆ. ಪಟ್ಟಣಕ್ಕೆ ಹುಬ್ಬಳ್ಳಿ ಹಾಗೂ ಗದಗ ನಗರಗಳಿಂದ ಖೋಟಾ ನೋಟುಗಳು ಹರಿದು ಬರುತ್ತಿವೆ ಎಂದು ಕೆಲ ಮೂಲಗಳು ತಿಳಿಸುತ್ತಿವೆ. ಹೊರ ರಾಜ್ಯದಲ್ಲಿರುವ ಹೈದ್ರಾಬಾದ್ ಕಡೆಯಿಂದಲೂ ಖೋಟಾ ನೋಟುಗಳು ಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಲ್ಲದೆ ಅಮಾವಾಸ್ಯೆ ಹಿಂದಿನ ಮುತ್ತು ನಂತರದ ದಿನಗಳಲ್ಲಿ ಭಟ್ಕಳ, ಶಿವಮೊಗ್ಗ, ಚಿಕ್ಕಮಂಗಳೂರ, ಬೆಳಗಾವಿ ಹಾಗೂ ಇತರ ನಗರಗಳಿಂದ ಲಕ್ಷ್ಮೇಶ್ವರಕ್ಕೆ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಈ ಪ್ರವಾಸಿಗರ ಮೂಲಕವೂ ಖೋಟಾ ನೋಟು ಚಲಾವಣೆಯಾಗಬಹುದಾಗಿದೆ ಎಂಬುದು ಜನತೆಯ ಅಭಿಪ್ರಾಯವಾಗಿದೆ.
ಜನರ ಸಂಕಷ್ಟ: ಖೋಟಾನೋಟುಗಳ ಹಾವಳಿಯಿಂದಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವ್ಯಾಪಾರಿಗಳು ಹೆಚ್ಚಾಗಿ ತಾವು ತೆಗೆದುಕೊಳ್ಳುವ ನೋಟುಗಳನ್ನು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ, ಸಾರ್ವಜನಿಕರಿಗೆ ಖೋಟಾ ನೋಟಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಅವರು ಮೋಸ ಹೋಗುತ್ತಿದ್ದಾರೆ.
ಪಟ್ಟಣದಲ್ಲಿ ಇಂತಹ ಪ್ರಕರಣಗಳು ಈ ಹಿಂದೆ ನಡೆದ ಬಗ್ಗೆ ನಮಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಅಲ್ಲದೇ ಇಂತಹ ಖೋಟಾ ನೋಟುಗಳು ಪಟ್ಟಣದಲ್ಲಿ ಆಗಾಗ ಚಲಾವಣೆಯಾಗುತ್ತಿರುವ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು ತನಿಖೆ ನಡೆಸಲಾಗುವುದು.
- ವಿಕಾಸ ಲಮಾಣಿ
ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣಾಧಿಕಾರಿ
- ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

