ಗದಗ

ಸದಸ್ಯರಿಗೆ ಅಧಿಕಾರ ಭಾಗ್ಯ ಯಾವಾಗ?

Published On :

ಮುಂಡರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ, ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಯಾಯಿತು. ಆದರೆ, 8 ತಿಂಗಳ ಹಿಂದೆಯೇ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಿಗೆ ಅಧಿಕಾರದ ಭಾಗ್ಯ ಮಾತ್ರ ಸಿಗುತ್ತಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಇದುವರೆಗೆ ಅಧಿಕಾರ ಹಸ್ತಾಂತರವಾಗದಿರುವುದರಿಂದ ತಮ್ಮ ಸದಸ್ಯತ್ವದ ಹುಮ್ಮಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿದ್ದು, 12 ಕಾಂಗ್ರೆಸ್ ಸದಸ್ಯರು, 8 ಬಿಜೆಪಿ ಸದಸ್ಯರು, ಓರ್ವ ಜೆಡಿಎಸ್ ಸದಸ್ಯ, ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಕೆಲವರು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದು ,ಈ ಅಧಿಕಾರ ಹಸ್ತಾಂತರ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಬೆಟ್ಟದಷ್ಟು ಸಮಸ್ಯೆ: ಮುಂಡರಗಿ ಪುರಸಭೆ ಚುನಾವಣೆ ಮುಗಿದು 8 ತಿಂಗಳು ಕಳೆದಿದ್ದು, ಇದುವರೆಗೂ ಅಧಿಕಾರ ಹಸ್ತಾಂತರ ನಡೆಯುತ್ತಿಲ್ಲ. ಅಧಿಕಾರಿಗಳು ಪಟ್ಟಣದ 23 ವಾರ್ಡ್‌ಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿಲ್ಲ. ನೂತನವಾಗಿ ಆಯ್ಕೆಯಾಗಿ ಬಂದಿರುವ ಸದಸ್ಯರು ಅಧಿಕಾರಿಗಳಿಗೆ ಏನಾದರೂ ಸಮಸ್ಯೆ ಹೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳು ನೂತನ ಪುರಸಭೆ ಸದಸ್ಯರಿಂದಲೇ ಕೇಳಿ ಬರುತ್ತಿವೆ. ಪಟ್ಟಣ ಎಸ್.ಎಸ್. ಪಾಟೀಲ ನಗರ, ಹೊಸ ಬಸ್‌ಸ್ಟ್ಯಾಂಡ್ ಹತ್ತಿರ, ವಿದ್ಯುತ್ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ತುಂಬಿ ತುಳುಕುತ್ತಿರುವ ಚರಂಡಿಗಳು, ಎಲ್ಲೆಂದರಲ್ಲಿ ಕಸಕಡ್ಡಿ ಬಿದ್ದಿರುವುದು ಸೇರಿದಂತೆ ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತು ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರೆ ಭರವಸೆ ನೀಡುತ್ತಾರೆ ಹೊರತು ಅವುಗಳು ಕಾರ್ಯ ರೂಪಕ್ಕೆ ಬರುತ್ತಿಲ್ಲ.
ಹಾಳಾದ ಉದ್ಯಾನವನಗಳು: ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಅವರ ಅಧಿಕಾರದ ಅವಧಿಯಲ್ಲಿ ನಿರ್ಮಾಣವಾದ ಪುರಸಭೆ ಪಕ್ಕದಲ್ಲಿರುವ ಸುಂದರವಾದ ಉದ್ಯಾನ ಇಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಂದವನ್ನು ಕಳೆದುಕೊಂಡಿದೆ. ಅದರಲ್ಲಿದ್ದ ಎಲ್ಲ ಹೂವಿನ ಗಿಡಗಳು, ಶೋ ಗಿಡಗಳು ಇಂದು ಮಾಯವಾಗಿ, ದನಕರುಗಳ-ಹಂದಿ, ನಾಯಿಗಳ ಬೀಡಾಗಿ ಉದ್ಯಾನವನ ಅನಾಥ ಪ್ರಜ್ಞೆಯಿಂದ ಬಳಲುತ್ತಿದೆ. ಇದೊಂದೇ ಅಲ್ಲ ಪಟ್ಟಣದ ಬಹುತೇಕ ಪುರಸಭೆ ಉದ್ಯಾನವನಗಳು ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.
ಅಧಿಕಾರಗಳೇ ಗೈರು: ಪುರಸಭೆಗೆ ನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದುಹೋಗುವ ಸಾರ್ವಜನಿಕರು ಕಚೇರಿ ಸಮಯದಲ್ಲಿ ಕೆಲವು ಅಧಿಕಾರಿಗಳು ಇರುವುದೇ ಇಲ್ಲ. ಮುಖ್ಯಾಧಿಕಾರಿಗಳಿದ್ದರೆ ಅಭಿಯಂತರಿರುವುದಿಲ್ಲ, ಅಭಿಯಂತರಿದ್ದರೆ ಮುಖ್ಯಾಧಿಕಾರಿ ಇರುವುದಿಲ್ಲ. ಕೆಲವೇ ಕೆಲವು ಅಧಿಕಾರಿಗಳು ಮಾತ್ರ ನಿತ್ಯ ಬಂದು ಕಾರ್ಯನಿರ್ವಹಿಸುತ್ತಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪುರಸಭೆ ಹತ್ತಿರದಲ್ಲೇ ಇರುವ ಹಳೆ ತಹಸೀಲ್ದಾರ್ ಕಚೇರಿಯ ಆವರಣ ಸಂರ್ಪೂಣವಾಗಿ ಶೌಚಾಲಯವಾಗಿ ಮಾರ್ಪಟ್ಟಿದೆ.
ಉತ್ಸಾಹ ಕಳೆದುಕೊಳ್ಳುತ್ತಿರುವ ಸದಸ್ಯರು:  23 ವಾರ್ಡ್‌ಗಳಲ್ಲಿ 3ನೇ ವಾರ್ಡಿನ ಕೊಟ್ರಮ್ಮ ಇಟಗಿ, 22ನೇ ವಾರ್ಡಿನ ರೀಹಾನಾಬೇಗಂ ಕೆಲೂರ ಈ ಇಬ್ಬರು ಸದಸ್ಯರನ್ನು ಹೊರತುಪಡಿಸಿದರೆ ಉಳಿದ 21 ನೂತನ ಸದಸ್ಯರು ಎಲ್ಲರೂ ಪ್ರಪ್ರಥಮ ಬಾರಿಗೆ ಪುರಸಭೆ ಮೆಟ್ಟಿಲೇರಿದವರು. ಇಲ್ಲಿನ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಸಾರ್ವಜನಿಕರ ಕೆಲಸ ಮಾಡಬೇಕೆನ್ನುವ ಉತ್ಸಾಹದಿಂದಲೇ ಬಂದವರು. ಕೆಲವು ವಾರ್ಡ್‌ಗಳಲ್ಲಿ ಸ್ವಚ್ಛತೆಯ ಕೊರತೆಯನ್ನರಿತು ಸ್ವತಃ ತಾವೇ ಚರಂಡಿ ಸ್ವಚ್ಛಗೊಳಿಸುವ ಕೆಲಸದಿಂದ ಹಿಡಿದು ಎಲ್ಲವನ್ನೂ ತಾವೇ ಮಾಡುತ್ತಿದ್ದಾರೆ. ಆದರೆ ಪುರಸಭೆ ಪ್ರವೇಶ ಮಾಡಿ ಅಧಿಕಾರ ನಡೆಸುವುದು ವಿಳಂಬವಾಗುತ್ತಿರುವುದರಿಂದ ಉತ್ಸಾಹ ಕಳೆದುಕೊಂಡಂತೆ ಕಂಡುಬರುತ್ತಿದೆ.
- ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.