ರೋಣ ಕ್ರೀಡಾಂಗಣ ಭಣಭಣ
ಕನ್ನಡಪ್ರಭ ವಾರ್ತೆ, ರೋಣ, ನ. 12
ಕ್ರೀಡೆ ಬೆಳವಣಿಗೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ನಿರ್ಮಿಸಲಾದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕ್ರೀಡಾಂಗಣದಲ್ಲಿ ಕನಿಷ್ಠ ಮೂಲ ಸೌಲಭ್ಯವೂ ಇಲ್ಲದ್ದರಿಂದ ಕ್ರೀಡಾಪಟುಗಳು ಅತ್ತ ಸುಳಿಯದಂತಾಗಿದೆ.
ಪಟ್ಟಣದ ಮಿನಿ ವಿಧಾನಸೌಧ ಬಳಿ 7 ಎಕರೆ ವಿಸ್ತಾರ ಹೊಂದಿರುವ ತಾಲೂಕು ಕ್ರೀಡಾಂಗಣ 400 ಮೀಟರ್ ಟ್ರ್ಯಾಕ್ ಒಳಗೊಂಡಿದೆ. ಕ್ರೀಡಾಂಗಣ ತುಂಬ ದಟ್ಟವಾಗಿ ಹುಲ್ಲು ಹಬ್ಬಿದೆ. ಜಾಲಿ ಗಿಡಗಳು ಎಲ್ಲೆಂದರಲ್ಲಿ ಬೆಳೆದಿವೆ. ಟ್ರ್ಯಾಕ್‌ನ್ನು ಗುರುತಿಸಲು ಕಾಣಸಿಗದಾಗಿದೆ.
ಮುಳ್ಳು, ಕಲ್ಲುಗಳಿಂದ ತುಂಬಿರುವ ಕ್ರೀಡಾಂಗಣದಲ್ಲಿ ಈಚೆಗೆ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಇಟ್ಟಿಗೆಯಿಂದ ನಿರ್ಮಿಸಲಾದ ಟ್ರ್ಯಾಕ್ ಸಂಪೂರ್ಣ ಕಿತ್ತು ಹೋಗಿದೆ. ಇಲ್ಲಿಗೆ ವ್ಯಾಯಾಮ ಮತ್ತು ವಿವಿಧ ಕ್ರೀಡೆಗಳ ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಯಾವುದೇ ಮೈದಾನವಿಲ್ಲ: ಕ್ರೀಡಾಂಗಣದ ಅಭಿವೃದ್ಧಿಗಾಗಿ ಈಗಾಗಲೇ ರು. 54 ಲಕ್ಷ ಖರ್ಚಾಗಿದೆಯಂತೆ. ಲೋಕೋಪಯೋಗಿ ಇಲಾಖೆಯವರು ಕ್ರೀಡಾಂಗಣ ಅಭಿವೃದ್ಧಿ ಮಾಡಿಕೊಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ನೆಪ ಮಾತ್ರಕ್ಕೆ ಕ್ರೀಡಾಂಗಣ ಸಿದ್ಧಗೊಳಿಸಿ ಕ್ರೀಡಾಸಕ್ತರನ್ನು ಕೆರಳುವಂತೆ ಮೈದಾನವನ್ನು ನಿರ್ಮಿಸಿ, ಕೈತೊಳೆದುಕೊಂಡಿದ್ದಾರೆ.
ಇಲ್ಲಿ ನಾಮಕಾವಸ್ಥೆಗೆ 400 ಮೀಟರ್ ಟ್ರ್ಯಾಕ್ ಮಾತ್ರ ತಯಾರಿಸಿದ್ದು, ಕೋಕೋ, ವಾಲಿಬಾಲ್, ಕಬಡ್ಡಿ, ಬಾಸ್ಕೇಟ್‌ಬಾಲ್, ಉದ್ದ ಜಿಗಿತ, ಹಾಕಿ, ಟೆನಿಸ್ ಕೋಟ್ ಸೇರಿದಂತೆ ಇಲ್ಲಿ ಯಾವುದೇ ಕ್ರೀಡಾ ಮೈದಾನಗಳನ್ನು ತಯಾರಿಸಿಲ್ಲ. ಕೆಂಪು ಮಣ್ಣು ಬಳಸದೇ ಕಪ್ಪು ಮಣ್ಣು ಬಳಸಿ ಕ್ರೀಡಾಂಗಣ ನಿರ್ಮಿಸಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: 1995ರಲ್ಲಿ ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರ ಅವರಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2007 ರಲ್ಲಿ ಶಾಸಕರಾಗಿದ್ದಾಗ ಕಳಕಪ್ಪ ಬಂಡಿ ಅವರಿಂದ ಉದ್ಘಾಟನೆಗೊಂಡಿತು. ವಿಪರ್ಯಾಸವೆಂದರೆ ಈವರೆಗೂ ಕ್ರೀಡಾಂಗಣಕ್ಕೆ ಜನ ಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಪುರಸಭೆ ಗಮನ ಹರಿಸಿಲ್ಲ. ಅಗತ್ಯ ಸೌಲ್ಯಭ ಕಲ್ಪಿಸುವಲ್ಲಿ ಮುಂದಾಗಿಲ್ಲ. ಕ್ರೀಡಾಂಗಣ ಅಭಿವೃದ್ಧಿಯಿಂದ ವಂಚಿತವಾಗಲು ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಈ ಹಿಂದಿನ ಶಾಸಕರಿಗೆ, ಪುರಸಭೆ, ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ. ಈಗಲಾದರೂ ಶಾಸಕ ಜಿ.ಎಸ್. ಪಾಟೀಲ ಅವರು ಕ್ರೀಡಾಂಗಣದ ಅಭಿವೃದ್ಧಿಗೆ ಮುಂದಾಗುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
- ಪಿ.ಎಸ್. ಪಾಟೀಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

