ಕನ್ನಡಧ್ವಜ ಅಪಹರಣ: ಕರವೇ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಗುಂದ, ನ. 12
ಪಟ್ಟಣದ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಗೆ ಹೊಂದಿಕೊಂಡಿರುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಧ್ವಜವನ್ನು ಯಾರೋ ಕಿಡಿಗೇಡಿಗಳು ಅಪಹರಣ ಮಾಡಿದ ಕ್ರಮ ಖಂಡಿಸಿ ತಾಲೂಕು ಕರವೇ ಕಾರ್ಯಕರ್ತರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಕರವೇ ಗೌರವಾಧ್ಯಕ್ಷ ಚನ್ನು ನಂದಿ ಮಾತನಾಡಿ, ಭವ್ಯ ಇತಿಹಾಸ ಹೊಂದಿದ ಕನ್ನಡ ನಾಡಿನಲ್ಲಿ ಕೆಲವು ಕಿಡಿಗೇಡಿಗಳು ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಬಾವುಟ ಅಪಹರಣ ಮಾಡಿರುವುದು ಖಂಡನಾರ್ಹ. ಈ ಕುರಿತು ಪೊಲೀಸರು ಸೂಕ್ತ ಕ್ರಮ ಕೈಗೊಂಡು ಧ್ವಜ ಅಪಹರಣ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಹನುಮಂತ ಮಜ್ಜಿಗುಡ್ಡ ಮಾತನಾಡಿ, ಪ್ರತಿ ವರ್ಷ ಕನ್ನಡ ರಾಜೋತ್ಸವ ಆಚರಣೆಯನ್ನು ನವೆಂಬರ್ ತಿಂಗಳಾದ್ಯಂತ ನೆರವೇರಿಸಲಾಗುತ್ತದೆ. ಆದರೆ, ಪಟ್ಟಣದ ಪ್ರಮಖ ವೃತ್ತವಾಗಿರುವ ಚನ್ನಮ್ಮ ವೃತ್ತದಲ್ಲಿನ ಕನ್ನಡ ಧ್ವಜ ಅಪಹರಣ ಮಾಡಿದ್ದು ಖಂಡನಾರ್ಹ. ಪಟ್ಟಣದಲ್ಲಿ ಎಲ್ಲ ಸಮಾಜದ ಜನರು ಶಾಂತಿ, ಸಹೋದರತ್ವ ಭಾವನೆ ಹೊಂದಿ ಜೀವನ ನಡೆಸುತ್ತಿದ್ದು, ಇಂತಹ ಸಂದರ್ಭ ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಪಟ್ಟಣದಲ್ಲಿನ ಶಾಂತಿ ಕದಡುವುದರಲ್ಲಿ ಸಂದೇಹವಿಲ್ಲ. ಈ ಕುರಿತು ಪೊಲೀಸರು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಚನ್ನಮ್ಮ ವೃತ್ತದ ಕಂಬಕ್ಕೆ ಹೊಸ ಧ್ವಜವನ್ನು ಏರಿಸಿ ಇಂತಹ ಕೃತ್ಯ ಎಸಗಿರುವವರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಬಳಿಕ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಚನ್ನಬಸಪ್ಪ ಕಂಠಿ, ಪಿಎಲ್ಡಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಬಿ.ಬಿ. ಐನಾಪುರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರು ದಂಡಿನ, ಗ್ರಾಪಂ ಸದಸ್ಯ ಹನಮಂತ ಸಂಗಟಿ, ನಾಗೇಶ ನರಸಪುರ, ಶಿವಪ್ಪ ಬೋಳಶಟ್ಟಿ, ಗಣೇಶ ಪಲ್ಯೆ, ರುದ್ರಪ್ಪ ಗಾಣಿಗೇರ, ಹೊನ್ನಪ್ಪ ಗಡೇಕಾರ, ರಾಚನಗೌಡ ಪಾಟೀಲ, ರುದ್ರಗೌಡ ಪಾಟೀಲ, ಚನ್ನವೀರಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

