ಅಲೈ ದೇವರಿಗೆ ರಾಷ್ಟ್ರಧ್ವಜದ ಮೆರುಗು
ಕನ್ನಡಪ್ರಭ ವಾರ್ತೆ, ನರೇಗಲ್ಲ, ನ. 13
ಇಲ್ಲಿ ಕೂಡಿಸುವ ಪಂಜಾ ದೇವರಿಗೆ ಒಂದಲ್ಲ 5ಕ್ಕೂ ಹೆಚ್ಚು ಗುನಗಡಗಿ ಹಾಕುವುದು ಒಂದೆಡೆಯಾದರೆ, ರಾಷ್ಟ್ರಧ್ವಜ ಕಟ್ಟುವುದು, ಮದ್ದು ಸುಡುವುದು ಇಲ್ಲಿನ ವಿಶೇಷ.
ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಸಮೀಪದ ಹಾಲಕೆರೆ ಗ್ರಾಮದಲ್ಲಿ ಇದು ನಡೆಯುವ ಆಚರಣೆ. ಈ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ವಾಸಿಸುವುದು ವಿರಳ. ಈ ಹಬ್ಬವನ್ನು ಹಿಂದೂಗಳೇ ನಿಂತು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಬುಧವಾರ ಸಂದಲ ರಾತ್ರಿಯಾಗಿದ್ದು, ನ. 14 ರಂದು ಕತ್ತಲ ರಾತ್ರಿ ಹಾಗೂ ನ. 15 ರಂದು ದೇವರು ಹೊಳೆಗೆ ಹೋಗುತ್ತವೆ.
ದೇವರಿಗೆ ಗುನಗಡಗಿ: ಪಂಜಾ ದೇವರಿಗೆ ಮೊದಲು ಅನ್ನದಾನ ಶ್ರೀಗಳು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಅಲೈ ದೇವರಿಗೆ ಗುನಗಡಗಿ ಕಟ್ಟಿದರೆಂಬುದು ವಾಡಿಕೆ. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಇಲ್ಲಿರುವ ದೊಡ್ಡ ದೇವರಿಗೆ ಗುನಗಡಗಿ ಕಟ್ಟುತ್ತಾ ಬರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಭಕ್ತಾದಿಗಳು ದೇವರಿಗೆ ಬೇಡಿಕೊಂಡು ಗುನಗಡಗಿ ಕೊಡಿಸುತ್ತಿದ್ದಾರೆ. ಅವುಗಳನ್ನೂ ದೇವರಿಗೆ ಕಟ್ಟಲಾಗುತ್ತೆ. ಈಗ 5-6 ಗುನಗಡಗಿಗಳನ್ನು ಕಟ್ಟಲಾಗುತ್ತಿದೆ.
ಆಕರ್ಷಕ ಮದ್ದು ಸುಡುವಿಕೆ: ನ. 15 ರಂದು ದೇವರು ಹೊಳೆಗೆ ಹೋಗುವ ದಿನ ಸಂಜೆ 5 ಗಂಟೆಗೆ ಹಾಲಕೇರಿ ಗ್ರಾಮದ ಹಿಂದೂ ಬಾಂಧವರೇ ಮದ್ದು ಸುಡುವುದು ವಿಶೇಷ. ಊರಿನ ಸಮಸ್ತ ಗೆಳೆಯರ ಬಳಗ ಸೇರಿಕೊಂಡು ಸುಮಾರು ರು. 40-50 ಸಾವಿರ ಮೌಲ್ಯ ಸುಡುತ್ತಾರೆ. ಇದು ಮುಸ್ಲಿಂ ದೇವರಿಗೆ ಹಿಂದೂ ಸಮಾಜ ಬಾಂಧವರು ನೀಡುವ ಭಕ್ತಿಯ ಪ್ರತೀಕವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ದೇವರಿಗೆ ರಾಷ್ಟ್ರಧ್ವಜ: ಹಿಂದೂ-ಮುಸ್ಲಿಂ ಸಮಾನತೆಯ ಪ್ರತೀಕವಾಗಿ ಇಲ್ಲಿನ ಅಲೈ ದೇವರಿಗೆ ರಾಷ್ಟ್ರ ಧ್ವಜವನ್ನು ಕಟ್ಟಲಾಗುತ್ತೆ. ಇದನ್ನು ಕತ್ತಲ ರಾತ್ರಿಯ ದಿನದಂದು ರಾತ್ರಿ ದೇವರನ್ನು ಸಿಂಗರಿಸುವಾಗ ಗುನಗಡಗಿಗಳನ್ನು ಹಾಗೂ ರಾಷ್ಟ್ರಧ್ವಜವನ್ನು ಕಟ್ಟಲಾಗುತ್ತೆ. ಮಾರನೆಯ ದಿನ ಬೆಳಗ್ಗೆ ಹಾಗೂ ಸಂಜೆಯವರೆಗೆ ಆ ರಾಷ್ಟ್ರಧ್ವಜ ದೇವರ ಮೇಲೆ ಇರುತ್ತದೆ. ಇಲ್ಲಿ ಯಾವುದೇ ಜಾತಿ, ಮತ ಎಣಿಸದೇ ಸರ್ವರೂ ಸಮಾನರೆನ್ನುವ ಭಾವನೆ ಮೂಡಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

