ಗದಗ

ಆಧಾರ್ ಇಲ್ಲದವರ ಗೋಳು

Published On :

ಗದಗ: ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿ, ಇದಕ್ಕೂ ಸಿಲಿಂಡರ್ ಸಬ್ಸಿಡಿಗೂ ಯಾವುದೇ ಸಂಬಂಧ ಬೇಡ. ಇದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೀಡಿರುವ ಆದೇಶ. ಆದರೆ, ಗದಗದಲ್ಲಿ ಮಾತ್ರ ಇದು ಪಾಲನೆಯಾಗುತ್ತಿಲ್ಲ. ಕೇವಲ ಸಿಲಿಂಡರ್ ಸಬ್ಸಿಡಿಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಶಿಷ್ಯವೇತನಕ್ಕೂ ಈ ಆಧಾರ್ ಅಡ್ಡಿಯಾಗಿದೆ.
ಎಲ್ಲದಕ್ಕೂ ಆಧಾರ್ ಕೇಳುವ ಜಿಲ್ಲಾಡಳಿತ ಮಾತ್ರ ಕಳೆದ 3 ತಿಂಗಳಿಂದ ಹೊಸ ಕಾರ್ಡಿಗೂ ಆಧಾರ ಹೊಂದದೇ ಇರುವವರಿಗೆ ಕಾರ್ಡ್ ವಿತರಣೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ರೂಪಿಸಿರೋ ಈ ಆಧಾರ ಕಾರ್ಡ್ ಈಗ  ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅದರಲ್ಲಿಯೂ ಬ್ಯಾಂಕ್ ಒಕ್ಕೂಟಗಳ ಪದಾಧಿಕಾರಿಗಳು, ಸಿಲಿಂಡರ್ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ. ಇಲ್ಲವಾದಲ್ಲಿ ನಿಮಗೆ ಸಬ್ಸಿಡಿ ನೀಡುವುದಿಲ್ಲ ಎಂದು ಜಿಲ್ಲೆಯ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ಕಟ್ಟಪ್ಪಣೆ ಹೊರಡಿಸಿವೆ. ಇನ್ನು ವಿದ್ಯಾರ್ಥಿಗಳು ಶಿಷ್ಯ ವೇತನ ಪಡೆಯಲು ಕೆಲ ಜಿಲ್ಲಾಮಟ್ಟದ ಅಧಿಕಾರಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಎನ್ನುತ್ತಿರುವುದು ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರದೇ ಇರುವ ಜನರ ನಿದ್ದೆಗೆಡಿಸಿದೆ.
3 ತಿಂಗಳಿಂದ ಸ್ಥಗಿತ: ಗ್ಯಾಸ್ ಏಜೆನ್ಸಿಗಳು ಹೊರಡಿಸಿರುವ ಆದೇಶ ಪಾಲನೆ ಮಾಡಿ ಕೊನೆಗೆ ಆಧಾರ್ ಕಾರ್ಡ್ ಪಡೆಯಬೇಕು ಎಂದೇನಾದರೂ ಸಾರ್ವಜನಿಕರು ಪ್ರಯತ್ನಿಸಿದರೆ, ಅವರಿಗೆ ಇಂದು ಕಾರ್ಡ್ ಸಿಗುವ ಸಾಧ್ಯತೆಯೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿ  3 ತಿಂಗಳಿಂದ ಆಧಾರ ಕಾರ್ಡ್ ವಿತರಣಾ ಕೇಂದ್ರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಆಶ್ಚರ್ಯ ಉಂಟಾಗುತ್ತದೆ. ಆಧಾರ್ ಕಾರ್ಡ್ ವಿತರಣಾ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ (ಏಜೆನ್ಸಿಗಳಿಗೆ) ಜಿಲ್ಲಾಡಳಿತ ನೀಡಬೇಕಾದ ಹಣವನ್ನು ನೀಡದೇ ಇರುವುದು ಕೇಂದ್ರಗಳು ಸ್ಥಗಿತಗೊಳ್ಳಲು ಪ್ರಮುಖ ಕಾರಣವಾಗಿದೆ.
ಅಂಚೆ ಕಚೇರಿಯಲ್ಲಿಯೂ ಬಂದ್: ಆಧಾರ್ ಕಾರ್ಡ್ ವಿತರಣೆಗಾಗಿಯೇ ನಿರ್ಮಾಣ ಮಾಡಿದ್ದ ಕೇಂದ್ರಗಳು ಸ್ಥಗಿತಗೊಂಡಿದ್ದರೂ ಕೇಂದ್ರ ಸರ್ಕಾರ ಅಂಚೆ ಇಲಾಖೆಯಲ್ಲಿ ಪ್ರತಿ ದಿನ 20 ಜನರಿಗೆ ಆಧಾರ್ ಕಾರ್ಡ್ ವಿತರಣೆಗೆ ಈ ಮೊದಲು ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ (ಸಿಬ್ಬಂದಿ ಹೇಳಿಕೆ ಪ್ರಕಾರ) ಅವು ಕೂಡಾ ಸ್ಥಗಿತಗೊಂಡಿವೆ. ಇದರಿಂದಾಗಿ ದಿನವೂ ಅಂಚೆ ಕಚೇರಿಗೆ ಜನರು ಅಲೆದು ಸುಸ್ತಾಗಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯ, ಕಾರ್ಯವೈಖರಿ ಬಗ್ಗೆ ಜನರು ಬೇಸರಗೊಂಡಿದ್ದಾರೆ.
ಲಾಭದ ದಂಧೆ: ಆಧಾರ್ ಕಾರ್ಡ್ ವಿತರಣೆ ಸ್ಥಗಿತಗೊಂಡಿರುವುದು, ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಸಬ್ಸಡಿಗೆ ಆಧಾರ್ ಕಡ್ಡಾಯಗೊಳಿಸಿರುವುದು ಕೆಲವರಿಗೆ ಲಾಭದಾಯಕ ದಂಧೆಯಾಗಿ ಮಾರ್ಪಟ್ಟಿದ್ದು, ಅಂಥವರು ಜಿಲ್ಲಾಡಳಿತ ಇನ್ನಷ್ಟು ದಿನಗಳ ಕಾಲ ಆಧಾರ್ ವಿತರಣೆಯನ್ನು ಪ್ರಾರಂಭಿಸದೇ ಇದ್ದರೆ ತಮಗೆ ಒಳ್ಳೆಯದು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಮತ್ತೆ ಕೆಲವರು, ಸಬ್ಸಿಡಿ ದರದಲ್ಲಿ ಪಡೆದ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಈ ಕಳ್ಳ ದಂಧೆ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ ಜಿಲ್ಲಾಡಳಿತ ತಕ್ಷಣವೇ ಆಧಾರ್ ಕಾರ್ಡ್ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಬೇಕಿದೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.