ಜನರ ತೆರಿಗೆ ಹಣ ದುರುಪಯೋಗ: ಆರೋಪ
ಗಜೇಂದ್ರಗಡ: ಸ್ಥಳೀಯ ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು, ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ. ಜತೆಗೆ ವಾಣಿಜ್ಯ ತೆರಿಗೆ ವಸೂಲಾತಿಯಲ್ಲಿ ಗೋಲಮಾಲ್ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ಸಿಪಿಐ(ಎಂ) ಗಂಭೀರ ಆರೋಪ ಮಾಡಿದೆ. ಈ ಕುರಿತು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಹಣ ದುರುಪಯೋಗದ ಕುರಿತು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿ ಬಳಿಕ ಸಿಪಿಐ(ಎಂ)ನ ಪುರಸಭೆ ಸದಸ್ಯೆ ಎಂ.ಎಸ್. ಹಡಪದ ಮಾತನಾಡಿ, ಪಟ್ಟಣದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಆಡಳಿತರೂಢ ಬಿಜೆಪಿಯ ಅಧ್ಯಕ್ಷರು ಸಾಮಾನ್ಯ ಸಭೆ ನಡೆಸಲು ಹಿಂದೇಟು ಹಾಕಲು ಕಾರಣವೇನು ಎಂದು ಪ್ರಶ್ನಿಸಿದರು. ಎಂಜಿನಿಯರ್ ಇಲ್ಲದಿರುವ ನೆಪದಿಂದಾಗಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಪುರಸಭೆ ಸದಸ್ಯರಿಗೆ ಆಡಳಿತ ಯಂತ್ರ ಕುರಿತು ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು. ಪಟ್ಟಣದ ಸಾರ್ವಜನಿಕ ಶೌಚಾಲಯ, ಬೀದಿ ದೀಪ ನಿರ್ವಹಣೆ ಮತ್ತು ಕಸ ನಿರ್ವಹಣೆ ಈ ಮೂರು ವಿಭಾಗಗಳ ನಿರ್ವಹಣೆಯನ್ನು ಸ್ಥಳೀಯ ಉಮಾ ಮಹೇಶ್ವರಿ ಇಲೆಕ್ಟ್ರಿಕಲ್ ಇವರಿಗೆ ಗುತ್ತಿಗೆ ನೀಡಿದ್ದು, ಈ ಎಲ್ಲ ನಿರ್ವಹಣೆಗಳಿಗಾಗಿ ಪುರಸಭೆಯಿಂದ ಪ್ರತಿ ತಿಂಗಳು ಶೌಚಾಲಯಕ್ಕೆ ರು. 84 ಸಾವಿರ, ಬೀದಿದೀಪ ರು. 77 ಸಾವಿರ ಮತ್ತು ಕಸ ವಿಲೆವಾರಿಗೆ ರು. 84 ಸಾವಿರ ನೀಡಲಾಗುತ್ತಿದೆ. ಜತೆಗೆ ಮತ್ತೊಂದು ಆಘಾತಕಾರಿ ವಿಷಯವೆನೆಂದರೆ ಪಟ್ಟಣದ ಗುಡ್ಡದ ಬಳಿ ಪುರಸಭೆ ವತಿಯಿಂದ ನಿರ್ಮಿಸಿರುವ ಉದ್ಯಾನವನ ನಿರ್ವಹಣೆಗೆ ಪ್ರತಿ ತಿಂಗಳು ರು. 85 ಸಾವಿರ ಖರ್ಚು ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ ಈ ಎಲ್ಲ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ. ಇದರಿಂದಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು. ಸಿಪಿಐ(ಎಂ) ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಪಟ್ಟಣದಲ್ಲಿ 13 ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪುರಸಭೆ ಅಧಿಕಾರಿಗಳ ಮಾಹಿತಿ ಇದ್ದು, ವಾಸ್ತವದಲ್ಲಿ ಕೇವಲ 5 ಶೌಚಾಲಯಗಳು ಮಾತ್ರ ಸಾರ್ವಜನಿಕರ ಬಳಕೆಯಲ್ಲಿವೆ. ಅವುಗಳಿಗೆ ಸರಿಯಾಗಿ ವಿದ್ಯುತ್, ನೀರಿನ ಪೂರೈಕೆಯಿಲ್ಲದೆ ಜನರು ಪರದಾಡುವಂತಾಗಿದೆ. ಪಟ್ಟಣದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿವೆ. ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಕೇವಲ ಪತ್ರಿಕೆಗಳಲ್ಲಿ ಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುವ ಪುರಸಭೆ ಆಡಳಿತದ ದುರುಪಯೋಗ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಮಗ್ರ ತನಿಖೆ ನಡೆಸಲು ಸಿಪಿಐ(ಎಂ) ಪಕ್ಷ ಒತ್ತಾಯಿಸಲಿದೆ ಎಂದರು. ಮುಖಂಡ ಬಿ.ಎಸ್. ಶೀಲವಂತರ ಮಾತನಾಡಿದರು. ಪೀರು ರಾಠೋಡ, ಫಯಾಜ್ ತೋಟದ, ಎಚ್ಚರಪ್ಪ ಬಡಿಗೇರ, ಕಳಕೇಶ ಉಕ್ಕಿಸಲ, ಕೆ.ಎಸ್. ಗುಗಲೋತ್ತರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

