ಸೂರ್ಯಕಾಂತಿಗೆ ನಂಜಾಣುಬಾಧೆ
ಕನ್ನಡಪ್ರಭ ವಾರ್ತೆ, ಗದಗ, ನ. 14
ಅತಿಯಾದ ಮಳೆ, ಸಮರ್ಪಕ ಬೀಜದ ಕೊರತೆಯ ನಡುವೆಯೂ ಉತ್ತಮ ಬೆಳೆಯ ನಿರೀಕ್ಷೆಯೊಂದಿಗೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆಗೀಗ ತೀವ್ರ ವೈರಸ್ (ನಂಜಾಣ) ಬಾಧೆ ಕಾಣಿಸಿಕೊಂಡಿದೆ. ಸೂರ್ಯಕಾಂತಿ ಬಿತ್ತನೆ ಮಾಡಿದ ಜಿಲ್ಲೆಯ ರೈತರಲ್ಲೀಗ ಇಳುವರಿ ಕುಸಿತದ ಭಯ ಪ್ರಾರಂಭವಾಗಿದ್ದು, ಹೂ ಬಿಡುವ ಪೂರ್ವದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಒಣಗಿ ಹೋಗುತ್ತಿದೆ.
ಸೂರ್ಯಕಾಂತಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಇದನ್ನು ರೈತರು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಾರಾದರೂ, ಅತಿಯಾದ ತೇವಾಂಶದಿಂದ ಬೆಳೆ ರಕ್ಷಿಸಿಕೊಳ್ಳುವತ್ತ ಗಮನ ನೀಡುವ ರೈತರು ಅತಿ ಹೆಚ್ಚು ಹಿಂಗಾರು ಹಂಗಾಮಿನಲ್ಲಿಯೇ ಬಿತ್ತನೆ ಮಾಡುವುದು ವಾಡಿಕೆ. ಆದರೆ, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, ಸದ್ಯ ನಂಜಾಣು ಬಾಧೆ ಕಾಡುತ್ತಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಬಿತ್ತನೆ ವಿವರ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 15500 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದೆ. ಒಣ ಬೇಸಾಯದಲ್ಲಿ 11300 ಹಾಗೂ ನೀರಾವರಿ ಕ್ಷೇತ್ರದಲ್ಲಿ 4200 ಹೆಕ್ಟೇರ್ ಪ್ರದೇಶದಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದೆ. ಇನ್ನು ಬಿತ್ತನೆ ಪೂರ್ವದಲ್ಲಿಯೇ ಈ ಬಾರಿ ಭೂಮಿಯಲ್ಲಿ ಅತಿಯಾದ ತೇವಾಂಶವಿದೆ. ಇದು ಬೆಳೆಗೆ ಉತ್ತಮವೇ. ಆದರೆ, ಸೂರ್ಯಕಾಂತಿ ಬೆಳೆಗೆ ಅತಿಯಾದ ತೇವಾಂಶದಿಂದ ವೈರಸ್ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಬಿತ್ತನೆ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತವಾಗಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ಸಾಲಿನಲ್ಲಿ 8 ಸಾವಿರ ಹೆಕ್ಟೇರ್ಗೂ ಕಡಿಮೆ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದೆ.
ಇತರ ಸಮಸ್ಯೆಗಳೂ ಇವೆ: ಬಿತ್ತನೆಯಾಗಿರುವ ಸೂರ್ಯಕಾಂತಿ ಬೆಳೆಗೆ ಒಂದೆಡೆ ಅತಿಯಾದ ತೇವಾಂಶ ಸಮಸ್ಯೆಯಾಗುತ್ತಿದ್ದರೆ, ಇನ್ನೊಂದೆಡೆ ವೈರಸ್(ನಂಜಾಣು) ಹಾಗೂ ರಸಹೀರುವ ಕೀಟ ಬಾಧೆ, ಎಲೆಗಳ ಬುಡದಲ್ಲಿ ಅತಿಯಾದ ಸೀರುಗಳ ಹಾವಳಿ, ಇದೆಲ್ಲಾ ಸಾಲದೆಂಬಂತೆ ಬೂದಿ ರೋಗ (ಬೆಳೆಯೆಲ್ಲಾ ಒಣಗಿದಂತಾಗುವುದು) ಕಾಣಿಸಿಕೊಂಡಿದೆ. ಇದು ಸಹಜವಾಗಿ ಆರ್ಥಿಕವಾಗಿ ಸಹಕಾರಿಯಾಗುತ್ತದೆ ಎನ್ನುವ ಮನಸ್ಸಿನಿಂದ ಬಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ಶುರುವಾಗಿದೆ.
ಇಳುವರಿ ಕುಸಿತ: ಸೂರ್ಯಕಾಂತಿ ಬೆಳೆಯು ಇನ್ನೂ ಬೆಳೆಯುವ ಹಂತದಲ್ಲಿರುವಾಗಲೇ ಕೀಟ ಮತ್ತು ರೋಗದ ಬಾಧೆ ಕಾಣಿಸಿಕೊಂಡಿರುವುದರಿಂದ ಬೆಳೆಯು ಸಮರ್ಪಕವಾದ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಎಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರಸಹೀರುವ ಕೀಟಗಳಿಂದ ಎಲೆಗಳೆಲ್ಲಾ ಒಣಗಿ ಹೋಗುತ್ತಿದ್ದು, ಇದರಿಂದ ಇಳುವರಿಯ ಪ್ರಮಾಣದಲ್ಲಿ ತೀವ್ರ ಕುಸಿತವಾಗಲಿದೆ. ನಾವು ಕೀಟಗಳನ್ನು ಹತೋಟಿಗೆ ತರಲು ಹೆಚ್ಚಿನ ಕ್ರಿಮಿನಾಶಕವನ್ನು ಸಿಂಪಡಿಸಿದರೂ ಕೀಟಗಳು ಎಲೆಗಳ ಬುಡದಲ್ಲಿರುವುದರಿಂದ ಹತೋಟಿ ದೊಡ್ಡ ಸಮಸ್ಯೆಯಾಗಿದೆ. ಇನ್ನು ವೈರಸ್ (ನಂಜಾಣು) ಬಂದ ಗಿಡವನ್ನು ಹೊಲದಿಂದಲೇ ಕಿತ್ತು ಒಗೆಯಬೇಕು. ಇಲ್ಲವಾದಲ್ಲಿ ತಕ್ಷಣವೇ ಪಕ್ಕದ ಗಿಡಗಳಿಗೂ ಹಬ್ಬುವ ಸಾಧ್ಯತೆ ಇರುವುದರಿಂದ ಸಹಜವಾಗಿ ರೈತರಲ್ಲಿ ಇಳುವರಿ ಕುಸಿತದ ಭೀತಿ ಆವರಿಸಿದೆ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

