ಗದಗ

ಆರಂಭವಾಗದ ಆಧಾರ್ ಕೌಂಟರ್

Published On :

ಕನ್ನಡಪ್ರಭ ವಾರ್ತೆ, ಗದಗ, ನ. 15
ಜಿಲ್ಲಾಡಳಿತ ಆದ್ಯಾಗೆ ನಿರ್ಲಿಪ್ತ ರೀತಿಯ ಆಡಳಿತಕ್ಕೆ ಜೋತು ಬಿದ್ದಿದೆಯೋ ಗೊತ್ತಿಲ್ಲ. ಏಕೆಂದರೆ ಇಲ್ಲಿನ ಆಧಾರ್ ಕಚೇರಿಗಳು ಜಿಲ್ಲಾಧಿಕಾರಿ ಹೇಳಿದ ಕೆಲಸವನ್ನು ನಿರ್ವಹಿಸದ ಮಟ್ಟಕ್ಕೆ ತಲುಪಿದ್ದು, ಇದರ ನೇರ (ಕೆಟ್ಟ) ಪರಿಣಾಮವನ್ನು ಎದುರಿಸುತ್ತಿರುವವರು ಮಾತ್ರ ಸಾರ್ವಜನಿಕರಾಗಿದ್ದಾರೆ.
ಜಿಲ್ಲೆಯ ಆಧಾರ್ ಕಾರ್ಡ್ ವಿತರಣೆ ಸ್ಥಗಿತಗೊಂಡಿರುವುದು, ಗ್ಯಾಸ್ ಏಜೆನ್ಸಿಗಳು ಸಿಲಿಂಡರ್‌ಗೆ ಸಬ್ಸಿಡಿ ನೀಡಲು ಆಧಾರ್ ಕಡ್ಡಾಯವಾಗಿ ಬೇಕು ಎಂದು ಹೇಳುತ್ತಿರುವುದರಿಂದ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕರ ಸಮಸ್ಯೆಗಳ ಕುರಿತು ಕನ್ನಡಪ್ರಭ ಈಚೆಗೆ ವರದಿ ಪ್ರಕಟಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್‌ಕುಮಾರ ಸೋಮವಾರದಿಂದಲೇ ಎಲ್ಲ ಆಧಾರ್ ಕಾರ್ಡ್ ವಿತರಣಾ ಕೇಂದ್ರ ಪ್ರಾರಂಭಿಸಲು ಸೂಚಿಸಿದ್ದೇನೆ ಎಂದಿದ್ದರು. ಇಂದಿಗೂ ಜಿಲ್ಲೆಯಲ್ಲಿ ಯಾವ ವಿತರಣೆಯ ಕೇಂದ್ರಗಳು ಪ್ರಾರಂಭವಾಗಿಲ್ಲ.
ಅಲೆದಾಟ: ಸೋಮವಾರದಿಂದಲೇ ನಗರಸಭೆಯ ಆವರಣದಲ್ಲಿ ಆಧಾರ್ ಕಾರ್ಡ್ ವಿತರಣಾ ಕೇಂದ್ರ ಪ್ರಾರಂಭಿಸಲು ತಿಳಿಸಿದ್ದ ಜಿಲ್ಲಾಧಿಕಾರಿಗಳ ಸೂಚನೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ ಸಾರ್ವಜನಿಕರು, ಆಧಾರ್ ಪಡೆಯುವ ನಿಟ್ಟಿನಲ್ಲಿ ನಗರಸಭೆಗೆ ಮುಗಿಬಿದ್ದಿದ್ದಾರೆ. ಆದರೆ, ಅಲ್ಲಿ ಆಧಾರ್ ಕೇಂದ್ರ ಮಾತ್ರ ಸ್ಥಾಪನೆಯಾಗಿಲ್ಲ. ಕಳೆದ 3 ತಿಂಗಳಿಂದ ಸ್ಥಗಿತಗೊಂಡಿದ್ದ ಈ ವ್ಯವಸ್ಥೆಗೆ ಮತ್ತೆ ಚಾಲನೆ ದೊರೆತಲ್ಲಿ ನಮಗೆ ಅನುಕೂಲವಾಗಲಿದೆ ಎನ್ನುವ ಸಾರ್ವಜನಿಕರ ಆಸೆ ಈಡೇರದೇ ಕೈಯಲ್ಲಿ ದಾಖಲೆ ಹಿಡಿದು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಅವಳಿ ನಗರದಲ್ಲಿ 60 ಸಾವಿರ: ಜಿಲ್ಲಾ ಕೇಂದ್ರವಾದ ಗದಗ ಬೆಟಗೇರಿ ಅವಳಿ ನಗರದಲ್ಲಿಯೇ 60 ಸಾವಿರಕ್ಕೂ ಹೆಚ್ಚಿನ ಜನರು ಆಧಾರ್ ಕಾರ್ಡ್ ಹೊಂದಿಲ್ಲ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕಡತಗಳೇ ಹೇಳುತ್ತಿವೆ. ಅದರಲ್ಲೂ ಪ್ರಮುಖವಾಗಿ ಸಿಲಿಂಡರ್ ಸಬ್ಸಿಡಿಗಾಗಿ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವ ಕೆಲಸಕ್ಕೆ ಬ್ಯಾಂಕ್ ಅಧಿಕಾರಿಗಳು ಏಕಾಏಕಿ ಕೈಹಾಕಿರುವ ಹಿನ್ನೆಲೆಯಲ್ಲಿ ಆಧಾರ್‌ಕಾರ್ಡ್ ಇಲ್ಲದೇ ಗ್ಯಾಸ್ ಸಂಪರ್ಕ ಹೊಂದಿರುವ ಶೇ.48ರಷ್ಟು ಜನರೀಗ ಸಿಲಿಂಡರ್ ಸಬ್ಸಿಡಿಯಿಂದ ವಂಚಿತರಾಗುತ್ತಿದ್ದಾರೆ.
ತಮ್ಮದಲ್ಲದ ತಪ್ಪಿಗೆ ಆರ್ಥಿಕ ಹಾನಿ: ಸದ್ಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಆಕಾಶಕ್ಕೆ ತಲುಪಿದ್ದು, ಬೆಲೆ ಹೆಚ್ಚಳದಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಈಗ ಪ್ರತಿ ತಿಂಗಳು 900ಕ್ಕೂ ಹೆಚ್ಚಿನ ಹಣ ಕೊಟ್ಟು ಸಿಲಿಂಡರ್ ಪಡೆಯುವಂತಾಗಿದೆ. ನಮಗೆ ಆಧಾರ್ ಕಾರ್ಡ್ ಪಡೆವ ಎಲ್ಲಾ ಅರ್ಹತೆ ಇದ್ದರೂ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಆಧಾರ್ ಕೇಂದ್ರಗಳು ಸ್ಥಗಿತಗೊಂಡು ನಾವೆಲ್ಲಾ ಕಾರ್ಡ್ ಪಡೆದಿಲ್ಲ. ಹಾಗಾಗಿ ನಾವೆಲ್ಲಾ ಮತ್ತಷ್ಟು ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ನಮ್ಮದಲ್ಲದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ.

ವಿಳಂಬ ಕುರಿತು ಮಾಹಿತಿ ಇಲ್ಲ
ಆಧಾರ್ ಕಾರ್ಡ್ ಕೇಂದ್ರಗಳ ಸ್ಥಾಪನೆ ನಿಟ್ಟಿನಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಮರ್ಪಕ ಮಾಹಿತಿ ನೀಡುವಲ್ಲಿ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿಗಳು ಲಭ್ಯವಾಗುತ್ತಿಲ್ಲ. ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದು, ಜಿಲ್ಲಾಡಳಿತದ ಈ ಜಾಣ ಕುರುಡುತನ ಪರೋಕ್ಷವಾಗಿ ಗ್ಯಾಸ್ ಏಜೆನ್ಸಿಗಳಿಗೆ ಅನುಕೂಲಕರವಾಗಿರುವುದು ಮಾತ್ರ ಸತ್ಯ.
ಬೇಗನೆ ಸ್ಥಾಪನೆಯಾಗಲಿ
ಎಲ್ಲದಕ್ಕೂ ಆಧಾರ್ ಕಡ್ಡಾಯ ಎನ್ನೋ ಜಿಲ್ಲಾಡಳಿತ ಆಧಾರ್ ಕಾರ್ಡ್ ವಿತರಿಸುವ ಕೌಂಟರ್‌ಗಳನ್ನೇ ಪ್ರಾರಂಭಿಸದಿರುವುದು ಯಾವ ನ್ಯಾಯ, ಕಾರ್ಡ್ ವಿತರಣೆ ಮಾಡುವ ಜವಾಬ್ದಾರಿ ನಿಮ್ಮದು. ಅದನ್ನೇ ಸರಿಯಾಗಿ ನಿಭಾಯಿಸದೇ ನಿರ್ಲಕ್ಷ್ಯತನ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಕೂಡಲೇ ಆಧಾರ್ ಕಾರ್ಡ್ ವಿತರಿಸುವ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು.
-ನವೀನ್, ಎಫ್.ಆರ್. ಬೆಂತೂರು
ಸಾರ್ವಜನಿಕರು.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.