ಗದಗ

ಮಾಚೇನಹಳ್ಳಿ: ಸಾರಾಯಿ ಅಕ್ರಮ ಮಾರಾಟ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 15
ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಸಾರಾಯಿ ಅಂಗಡಿಗಳ ಮಾಲೀಕರು ಹಗಲು-ರಾತ್ರಿ ಎನ್ನದೇ ಸಾರಾಯಿ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದು, ಗ್ರಾಮದ ಬಸ್ ನಿಲ್ದಾಣದ ಎದುರೇ ಗೂಡಂಗಡಿನಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಿರುವುದು ಗ್ರಾಮದ ಮಹಿಳೆಯರಿಗೆ ಬಸ್ ನಿಲ್ದಾಣಕ್ಕೆ ಬರುವುದು ದುಸ್ತರವಾಗಿದೆ.
ಸಾರಾಯಿ ಅಕ್ರಮವಾಗಿ ಸರಬರಾಜಾಗುತ್ತಿರುವ ಕುರಿತು ಪ್ರತಿಭಟನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಗ್ರಾಮದ ಚಹಾದ ಅಂಗಡಿ, ಬೀಡಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ.
ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಇವರೊಂದಿಗೆ ಶಾಮಿಲಾಗಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೂಡಲೇ ಇದನ್ನು ಬಂದ್ ಮಾಡಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಬೇಜವಾಬ್ದಾರಿ: ಅನೇಕ ಸಮಸ್ಯೆಗಳು ಈ ಗ್ರಾಮದಲ್ಲಿ ಕಂಡುಬಂದರೂ ಜನಸ್ಪಂದನ ಕಾರ್ಯಕ್ರಮ ಗ್ರಾಮದಲ್ಲಿ ನಡೆದಿಲ್ಲ. 200ಕ್ಕೂ ಹೆಚ್ಚು ಮಹಿಳೆಯರು ಸಾರಾಯಿ ಮುಕ್ತ ಗ್ರಾಮಕ್ಕೆ ಆಗ್ರಹಿಸಿ ತಹಸೀಲ್ ಕಚೇರಿಯಲ್ಲಿ ಈ ಹಿಂದೆ ಉಗ್ರ ಪ್ರತಿಭಟನೆ ನಡೆಸಿದ್ದರು.
ತಹಸೀಲ್ದಾರ್, ಪೊಲೀಸ್, ಅಬಕಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿದ್ದಾರೆ. ಕಾಟಾಚಾರಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಸಾರಾಯಿ ಅಕ್ರಮ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಗ್ರಾಪಂ ಸದಸ್ಯ ಶಂಕರ ಮರಾಠೆ ಆರೋಪಿಸಿದ್ದಾರೆ.
ಮಹಿಳೆಯರಿಗೆ ತೀವ್ರ ತೊಂದರೆ: ಬಸ್ ನಿಲ್ದಾಣದ ಸುತ್ತಲೂ 9ಕ್ಕೂ ಹೆಚ್ಚು ಸಾರಾಯಿ ಮಾರಾಟ ಮಾಡುವ ಡಬ್ಬಾ ಅಂಗಡಿಗಳಿವೆ. ಇದೇ ಮಾರ್ಗವಾಗಿ ನಿತ್ಯ ಗ್ರಾಮದ ಮಹಿಳೆಯರು ಹೊಲಕ್ಕೆ, ಬೇರೆ ಊರುಗಳಿಗೆ ಹೋಗುತ್ತಿದ್ದು, ತೀವ್ರ ತೊಂದರೆಯಾಗಿದೆ. ಕುಡಿತದ ಚಟಕ್ಕೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ಬಲಿಯಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಗಾಂವಠಾಣಾ ಜಾಗಾದಲ್ಲಿಯೇ ಈ ಅಂಗಡಿಗಳು ತಲೆ ಎತ್ತಿದ್ದು, ತೆರವುಗೊಳಿಸಿ ಮಹಿಳೆಯರ ಮಾನ ಕಾಪಾಡಬೇಕಾಗಿದೆ.
ಮದುವೆ ದಿಬ್ಬಣಕ್ಕೆ ಹೋಗುವ ಲಾರಿಗಳನ್ನು ಹಿಡಿದು ದಂಡ ಹಾಕುತ್ತಿರುವ ಅಧಿಕಾರಿಗಳು ಸಾರಾಯಿ ಸರಬರಾಜು ಮಾಡುವ ವಾಹನ ತಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕುಡಿತದ ಚಟದಿಂದಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದು, ವಾರದೊಳಗಾಗಿ ಅವ್ಯಾಹತವಾಗಿ ಸರಬರಾಜಾಗುತ್ತಿರುವ ಅಕ್ರಮ ಸಾರಾಯಿ ತಡೆಯದಿದ್ದಲ್ಲಿ ಗ್ರಾಮಸ್ಥರೇ ಸೇರಿ ಅಂಗಡಿಗಳಿಗೆ ಹಾಗೂ ಮದ್ಯ ಸರಬರಾಜು ಮಾಡುವ ವಾಹನಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳೆಯರ ಮತ್ತು ಮಕ್ಕಳ ಗೋಳು ಕೇಳದೆ ಅಧಿಕಾರಿಗಳು ತಮ್ಮ ಬೇಜವಾಬ್ದಾರಿ ಪ್ರವೃತ್ತಿ ಮುಂದುವರಿಸಿದ್ದೇ ಆದಲ್ಲಿ ಗ್ರಾಮದಲ್ಲಿ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದು, ಎಲ್ಲದಕ್ಕೂ ತಹಸೀಲ್ದಾರ್, ಅಬಕಾರಿ ಮತ್ತು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳೇ ಹೊಣೆಗಾರರು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.