ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಶಿವಾನುಭವ
ಗದಗ:  ನಗರದ ಆಧ್ಮಾತ್ಮ ವಿದ್ಯಾಶ್ರಮದಲ್ಲಿ ನ. 17ರ ಸಂಜೆ 6ಕ್ಕೆ ನೀಲಮ್ಮತಾಯಿಯವರ ಸಾನ್ನಿಧ್ಯದಲ್ಲಿ ಶಿವಾನುಭವ ಪ್ರವಚನ ಜರುಗುವುದು. ಬಿ.ಬಿ. ಭಾವಿಕಟ್ಟಿ (ಸುಗ್ಗಿ) ಅಧ್ಯಕ್ಷತೆ ವಹಿಸುವರು. ಗದಗನ ಶಿವಾನಂದ ಮಠದ ದಯಾನಂದ ಶ್ರೀಗಳು ಉತ್ತಿಷ್ಟತ ಜಾಗ್ರತ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಬೆಳಗ್ಗೆ 7ಕ್ಕೆ ಶ್ರೀದೇವಿಗೆ ರುದ್ರಾಭಿಷೇಕ, ಸಹಸ್ರನಾಮಾವಳಿ, ಕುಂಕುಮಾರ್ಚನೆ ಹಾಗೂ ಬಿಲ್ವಾರ್ಚನೆ ಜರುಗಲಿದ್ದು, ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ತಪಾಸಣಾ ಶಿಬಿರ
ಗಜೇಂದ್ರಗಡ: ಸ್ಥಳೀಯ ಚಿಗುರು ಗ್ರಾಮೀಣ ಮತ್ತು ಪಟ್ಟಣಾಭಿವೃದ್ಧಿ ಸಂಸ್ಥೆ ಹಾಗೂ ಪುರಸಭೆ ವತಿಯಿಂದ ಅಂಗವಿಕಲರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ. 17ರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಕಟ್ಟಿಬಸವೇಶ್ವರ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ಮುಖ್ಯಾಧಿಕಾರಿ ಕೆ.ಐ. ನಾಗನೂರ, ಸಂಸ್ಥೆಯ ನಿರ್ದೇಶಕ ಸಂಗಪ್ಪ ಕುಂಬಾರ, ಡಾ. ಆರ್.ಎಸ್. ಜೀರೆ, ಡಾ. ವೀರಣ್ಣ ಮಾಳಗಿ, ಮಹೇಶ ನಿಡಶೇಶಿ, ಅಂದಾನಪ್ಪ ಹೊಸಂಗಡಿ ಮುಂತಾದವರು ಉಪಸ್ಥಿತರಿರುವರು.
ಇಂದು ಶಿವಾನುಭವ
ಮುಂಡರಗಿ:  ಸ್ಥಳೀಯ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಪ್ರತಿ ಹುಣ್ಣಿಮೆಯ ದಿನ ಜರುಗುವ ಶಿವಾನುಭವದಲ್ಲಿ 1688ನೇ ಮಾಸಿಕ ಶಿವಾನುಭವ ಹಾಗೂ ಜ್ಞಾನನಿಧಿ ಉಳಿವಿ ಚನ್ನಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮವು ನ. 17ರ ಸಂಜೆ 7ಗಂಟೆಗೆ ಜರುಗಲಿದೆ.  ಡಾ. ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯವಹಿಸಲಿದ್ದು, ಶಂಭುಲಿಂಗ ಶಾಸ್ತ್ರಿ ಅಬ್ಬಿಗೇರಿ ಆಗಮಿಸಲಿದ್ದಾರೆ. ಶ್ರೀಮಠದ ಸರ್ವಧರ್ಮ ಭಕ್ತಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಲಾರಿ ಹಾಯಿಸಿ ಪರಾರಿ: ನೌಕರನ ಸಾವು
ಗದಗ:  ತಾಲೂಕಿನ ಅಡಿವಿಸೋಮಾಪುರ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯಲ್ಲಿ ನಿರತರಾಗಿದ್ದ ನೌಕರನ ಮೇಲೆ ಅಕ್ರಮ ಮರಳು ತುಂಬಿದ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ. ಮೃತನನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೌಕರ ಕೆ. ನಂಜಪ್ಪ(55) ಎಂದು ಗುರುತಿಸಲಾಗಿದೆ. ಲಾರಿ ಬರುತ್ತಿರುವುದನ್ನು ಗಮನಿಸಿದ ನೌಕರ ಕೆ. ನಂಜಪ್ಪ ತಪಾಸಣೆ ಮಾಡಲು ಮುಂದಾದಾಗ ಅವನ ಮೇಲೆ ಲಾರಿ ಹಾಯಿಸಿಕೊಂಡು ಹೋಗಲಾಗಿದೆ. ನೌಕರ ಸಾಯುವ ಮೊದಲು ಲಾರಿಯ ಸಂಖ್ಯೆ (ಕೆಎ 25, ಬಿ-9525)ಯನ್ನು ಬರೆದಿಟ್ಟು ಮೃತಪಟ್ಟಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರು ಪಲ್ಟಿ: ಓರ್ವ ಸಾವು
ಗಜೇಂದ್ರಗಡ:  ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಮೀಪದ ಸೂಡಿ ಕ್ರಾಸ್ ಬಳಿ ಜರುಗಿದೆ. ಮೃತನನ್ನು ಮೌನೇಶ ಪತ್ತಾರ (37) ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಲಿಂಗಸಗೂರ ತಾಲೂಕಿನ ಗುಮಗೇರಾ ಗ್ರಾಮದವನೆನ್ನಲಾಗಿದೆ. ಲಿಂಗಸೂರಿನಿಂದ ನರಗುಂದಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಈ ವ್ಯಕ್ತಿಯೊಬ್ಬನನ್ನು ಹೊರತುಪಡಿಸಿ ಇನ್ಯಾರು ಇರಲಿಲ್ಲ. ಕಾರು ಅವನೇ ಚಾಲನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎನ್ನಲಾಗಿದೆ. ಈ ಕುರಿತು ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದಿನಿಂದ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ
ಗದಗ: ಎಡೆಯೂರ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ 38ನೇ ವರ್ಷದ ಪಾದಯಾತ್ರೆಯು ನ. 17 ರಂದು ಮಧ್ಯಾಹ್ನ 3 ಗಂಟೆಗೆ ಸಮೀಪದ ಶಲವಡಿ ಗ್ರಾಮದಿಂದ ಹೊರಡಲಿದೆ. ನವಲಗುಂದದಿಂದ ಶಲವಡಿ, 18 ರಂದು ಕುರಟ್ಟಿ, ಚಿಕ್ಕಹಂದಿಗೋಳ ಮಾರ್ಗವಾಗಿ ಕುರ್ತಕೋಟಿ, 19 ರಂದು ಕುರ್ತಕೋಟಿಯಿಂದ ಮುಳಗುಂದ, ಮಾಗಡಿ ಮಾರ್ಗವಾಗಿ ಬಟ್ಟೂರ ಹಾಗೂ 20 ರಂದು ಬಟ್ಟೂರದಿಂದ ಸುರಣಗಿ, ಬಾಲೆಹೊಸೂರ ಮಾರ್ಗವಾಗಿ ಹಾಲಗಿ ಗ್ರಾಮ ಸೇರಲಿದೆ. ಪಾದಯಾತ್ರೆಯಲ್ಲಿ ಸುಮಾರು 500 ಯಾತ್ರಾರ್ಥಿಗಳು ಪಾಲ್ಗೊಳ್ಳಲಿದ್ದು, ಭಕ್ತರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಗರದ ಟಾಂಗಾಕೂಟದ ಹತ್ತಿರವಿರುವ ಬಸಪ್ಪ ಅಂದಾನಪ್ಪ ಗುಗ್ಗರಿ ಬಾಂಡೆ ಅಂಗಡಿ ಹಾಗೂ ಎಪಿಎಂಸಿಯಲ್ಲಿರುವ ಬಸವರಾಜ ವಾಲಿ ಟ್ರೇಡಿಂಗ್ ಕಂ. ದಲಾಲಿ ಅಂಗಡಿ ಮೊ. 9483146840 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.