ಗದಗ

ಹದಗೆಟ್ಟ ರಸ್ತೆಯಿಂದಸುಸ್ತಾದ ಪ್ರಯಾಣಿಕರು

Published On :

ನರೇಗಲ್ಲ: ನೀವೇನಾದರೂ ನರೇಗಲ್ಲ-ಕೋಟುಮಚಗಿ ರಸ್ತೆಗೆ ಬಂದರೆ ಅಸ್ತಮಾ, ಅಲರ್ಜಿ ಮುಂತಾದ ರೋಗಗಳಿಗ ತುತ್ತಾಗುವುದು ಗ್ಯಾರಂಟಿ.
ಹೌದು, ನರೇಗಲ್ಲ-ಕೋಟುಮಚಗಿ ಮಧ್ಯೆ ಕಳೆದ 1 ವರ್ಷದಿಂದ ಕುಂಟುತ್ತಾ ಸಾಗಿರುವ ರಸ್ತೆ ಕಾಮಗಾರಿಯಿಂದ ಧೂಳು, ಹರಳುಗಳು ಎದ್ದು ಸಂಚರಿಸುವ ಪ್ರಯಾಣಿಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ.
ಈ ರಸ್ತೆ ಇಲಾಖೆಯು ನಿರ್ಲಕ್ಷಿಸುವಂತಹ ಚಿಕ್ಕ ರಸ್ತೆಯಾಗಲಿ, ಸಣ್ಣ ಗ್ರಾಮದ ಸಣ್ಣ ಒಳ ರಸ್ತೆಯಾಗಲಿ ಅಲ್ಲ. ಇದು ಹುಬ್ಬಳ್ಳಿಯಿಂದ ದೂರದ ಇಳಕಲ್, ಬಳ್ಳಾರಿ, ಗುಲ್ಬರ್ಗಾ, ಹೈದರಾಬಾದ್, ರಾಯಚೂರು ಮುಂತಾದ ಮುಖ್ಯ ನಗರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಇದು ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯೇ ಹೀಗಾದರೆ ಇನ್ನುಳಿದ ದಾರಿಗಳ ಸ್ಥಿತಿ ಹೇಗಿರಬೇಡ..!
ಜನತೆ ಹೊಸ ರಸ್ತೆಯ ಕನಸನ್ನು ಬಿಟ್ಟು ಕೆರೆದ, ಹರಳುಗಳೆದ್ದ, ಧೂಳು ತುಂಬಿ ರೋಗ ನೀಡುವ ರಸ್ತೆಯ ಮೇಲೆ 5-6 ತಿಂಗಳಿನಿಂದ ಒದ್ದಾಡುತ್ತ, ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದರೂ ಯಾರೂ ಕ್ಯಾರೆ ಎನ್ನಲಿಲ್ಲ. ಈಗ ಮತ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಅದು ಎಷ್ಟು ದಿನಗಳ ಕಾಲ ನಡೆಯುತ್ತದೆಯೋ ದೇವರಿಗೇ ಗೊತ್ತು.
ಹಲವು ಅವಘಡ : ಈ ರಸ್ತೆಯಲ್ಲಿ ಅದೆಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡಿದ್ದಾರೋ ಲೆಕ್ಕವಿಲ್ಲ. ಹಲವು ವಾಹನಗಳು ಪಂಕ್ಚರ್ ಆಗಿ ನಡು ರಸ್ತೆಯಲ್ಲೇ ನಿಂತ ಉದಾಹರಣೆಗಳು ಸಾಕಷ್ಟಿವೆ. ಈ ಹದಗೆಟ್ಟ ರಸ್ತೆಯಿಂದ ಹಲವು ರೀತಿಯ ತೊಂದರೆಗೊಳಗಾಗಿ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಯಾವಾಗಲಾದರೂ ಈ ರಸ್ತೆ ಸುಧಾರಣೆಗೊಳ್ಳತ್ತದೆಯೇ ಎನ್ನುವುದೇ ಚಿಂತೆಯಾಗಿದೆ.
ಹೀಗೆ ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರೆಲ್ಲ ನಿತ್ಯವೂ ಶಪಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನು ನರೇಗಲ್ಲ-ಗಜೇಂದ್ರಗಡ ರಸ್ತೆಯೂ ಸಮಸ್ಯೆಯಿಂದ ಮುಕ್ತವಾಗಿಲ್ಲ. ಅಲ್ಲಿಯೂ ಇದೇ ರೀತಿಯ ಪರಿಸ್ಥಿತಿ. ಏರುದಿನ್ನಿಯ ರಸ್ತೆ, ರಸ್ತೆಯ ಮಧ್ಯದಲ್ಲಿ ಕಂದಕಗಳು, ಹದಗೆಟ್ಟ ರಸ್ತೆಯಿಂದ ನಿತ್ಯವೂ ಕಿರಿಕಿರಿ ತಪ್ಪುತ್ತಿಲ್ಲ.
ಈ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರಿಗೆ ಹಗಲಿನ ವೇಳೆಯೇ ಸಂಚರಿಸುವುದು ಕಷ್ಟ. ರಾತ್ರಿಯಂತೂ ಇಲ್ಲಿ ಹೋಗುವುದು ದುಸ್ಥರ. ರಾತ್ರಿ ವೇಳೆ ತಗ್ಗುಗಳು ಕಾಣದೇ ವಾಹನಗಳು ಬಿದ್ದು ಅಪಘಾತ ನಡೆಯುವ ಸಂಭವ ಹೆಚ್ಚಿವೆ. ಸುತ್ತ ಮುತ್ತಲ ಜಮೀನಿನ ರೈತರು ಚಕ್ಕಡಿಯೊಂದಿಗೆ ತಮ್ಮ ಹೊಲಕ್ಕೆ ತೆರಳಲು, ಕೃಷಿ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗ ಕಾಮಗಾರಿ ಪ್ರಾರಂಭವಾಗಿದೆಯಾದರೂ ಅದು ಕುಂಟುತ್ತಾ ಸಾಗಿದೆ. ರಸ್ತೆಯುದ್ದಗಲಕ್ಕೂ ಕಡಿಗಳ ಹರಡುವಿಕೆಯಿಂದಾಗಿ ಮತ್ತಷ್ಟು ಸಮಸ್ಯೆ ಹೆಚ್ಚಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
- ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.